ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನ ಮೇಕಪ್ ಆರ್ಟಿಸ್ಟ್‌ಗೆ 25 ಲಕ್ಷ ರೂ. ಮೋಸ

gold-513062_640
Published on

ಶಿಗ್ಗಾಂವಿ: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನ ಮೇಕಪ್ ಆರ್ಟಿಸ್ಟ್ ಹಾಗೂ ಆತನ ಸ್ನೇಹಿತನಿಗೆ 25 ಲಕ್ಷ ರೂ. ಮೋಸ ಮಾಡಿದ ಘಟನೆ ತಾಲೂಕಿನ ಕಾಮನಳ್ಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಬೆಂಗಳೂರಿನ ಲಗ್ಗೇರಿಯ ನರಸಿಂಹಸ್ವಾಮಿ ಲೇಔಟ್‌ನ ನಿವಾಸಿ ಹಾಗೂ ಮೇಕಪ್ ಆರ್ಟಿಸ್ಟ್ ಲಕ್ಷ್ಮಣ ಚನ್ನಬಸಯ್ಯ (40) ಹಾಗೂ ರಾಬಿನ್ ಎಂಬುವರು ಮೋಸ ಹೋದವರು.
ಲಕ್ಷ್ಮಣ ಅವರಿಗೆ ಕುಮಾರ ಎಂಬ ಹೆಸರಿನಿಂದ ಫೋನ್ ಮಾಡಿದ ಅಪರಿಚಿತ ವ್ಯಕ್ತಿ ನಮಗೆ ಪರಿಚಯ ಇರುವ ಅಜ್ಜನ ಬಳಿ ಚಿನ್ನವಿದೆ. ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅದರಿಂದ ಅವರ ಇಬ್ಬರ ಹೆಣ್ಣು ಮಕ್ಕಳ ಮದುವೆಗೆ ಹಾಗೂ ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿದಂತಾಗುತ್ತದೆ ಎಂದು ನಂಬಿಸಿದ್ದಾರೆ.
ಇದನ್ನು ನಂಬಿದ ಲಕ್ಷ್ಮಣ ಹಾಗೂ ಆತನ ಸ್ನೇಹಿತ ರಾಬಿನ್ ಚಿನ್ನ ಖರೀದಿಸಲು ಮುಂದಾಗಿದ್ದಾರೆ. ಸೆ. 4ರಂದು ಅವರನ್ನು ಹೂವಿನಹಡಗಲಿ ತಾಲೂಕಿನ ಹೊಳಲ ಗ್ರಾಮಕ್ಕೆ ಕರೆಯಿಸಿಕೊಂಡು ಎರಡು ಚಿನ್ನದ ನಾಣ್ಯಗಳನ್ನು ಕೊಟ್ಟು ಇದನ್ನು ಪರಿಶೀಲಿಸಿಕೊಂಡು, ಹಣ ತೆಗೆದುಕೊಂಡು ವಾಪಸ್ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ.
25 ಲಕ್ಷ ರೂ. ಸಿದ್ಧಪಡಿಸಿಕೊಂಡು ಚಿನ್ನ ತೆಗೆದುಕೊಳ್ಳಲು ಬಂದ ಲಕ್ಷ್ಮಣ ಅವರನ್ನು ತಾಲೂಕಿನ ಕಾಮನಳ್ಳಿ ಬಳಿ ಕರೆಯಿಸಿಕೊಂಡ ಖದೀಮರು ಮೊದಲಿಗೆ ಅವರಿಂದ 25 ಲಕ್ಷ ರೂ. ತೆಗೆದುಕೊಂಡಿದ್ದಾರೆ. ನಂತರ ಇಲ್ಲಿಯೆ ಇರಿ ನಾವು ಚಿನ್ನ ತೆಗೆದುಕೊಂಡು ಬರುತ್ತೇವೆ ಎಂದು ಹೇಳಿ ಹೋದವರು ವಾಪಸ್ ಬಂದು ಚಿನ್ನ ಕೊಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net