

ವಿಜಯವಾಣಿ ಸುದ್ದಿಜಾಲ ಕೆಜಿಎಫ್ ಬಿಜಿಎಂಎಲ್ ಪ್ರದೇಶದ ಎಂ.ಎಂ.ಟೆನೆಂಟ್ ಶಾಫ್ಟ್‌ನ ಸಿಂಕ್‌ನಲ್ಲಿ ರಾತ್ರೋರಾತ್ರಿ ಚಿನ್ನದ ಅದಿರಿಗಾಗಿ ಇಳಿಯುವಾಗ ಕಾಲು ಜಾರಿಬಿದ್ದು ಮೃತಪಟ್ಟಿರುವ ಮೂವರಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಮತ್ತೊಬ್ಬರ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ. ಸೂಸೈಪಾಳ್ಯದ ಲೂರ್ದನಗರ ನಿವಾಸಿಗಳಾದ ಕಂದ (50) ಇವರ ಮಗ ಪಡಿಯಪ್ಪ (20), ಜೋಸೆಫ್ ಡಿಸೊಜಾ (50) ಮೃತರು. ಇವರ ಜತೆಗಿದ್ದ ವಿಕ್ಟರ್ (45 ) ಕಾರ್ತಿಕ್ (47) ಎಂಬುವರನ್ನು ಪೊಲೀಸರು ಬಂಧಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಚರ್ಡ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ವಿಷಗಾಳಿ ಸೇವಿಸಿ ಕೆಳಗೆ ಬಿದ್ದರು: ಮಾರಿಕುಪ್ಪಂ ಠಾಣೆ ಸಮೀಪದಲ್ಲಿರುವ ಶಾಫ್ಟ್‌ನಲ್ಲಿ ಕಳ್ಳತನಕ್ಕಾಗಿ ರಾತ್ರಿ 8 ಗಂಟೆಗೆ ಆರು ಜನರು ಬಂದಿದ್ದಾರೆ. ಮೊದಲು ಸಿಂಕ್‌ನೊಳಗೆ ಕಂದ, ಜೋಸೆಫ್ ಮತ್ತು ಪಡಿಯಪ್ಪ ಇಳಿದಿದ್ದಾರೆ. ಸುಮಾರು 2000 ಅಡಿ ಆಳಕ್ಕಿರುವ ಶಾಫ್ಟ್‌ನೊಳಗೆ ಹೋಗುತ್ತಿದ್ದಂತೆ ಕಂದ ಮತ್ತು ಜೋಸೆಫ್ ಡಿಸೋಜಾ ವಿಷಯುಕ್ತ ಗಾಳಿ ಸೇವಿಸಿ ಕೆಳಕ್ಕೆ ಬಿದ್ದಿದ್ದಾರೆ. ತಂದೆಯನ್ನು ಪಾರು ಮಾಡಲು ಪಡಿಯಪ್ಪ ಇಳಿಯುತ್ತಿದ್ದಂತೆಯೇ ಅವನೂ ಕೆಳಕ್ಕೆ ಬಿದ್ದಿದ್ದಾನೆ. ಸಿಂಕ್‌ನೊಳಗೆ ಇಳಿಯದೆ ಮೆಟ್ಟಿಲಿನ ಮೇಲೆ ನಿಂತಿದ್ದ ಕಾರ್ತಿಕ್, ರಿಚರ್ಡ್ ಮತ್ತು ವಿಕ್ಟರ್ ಅಪಾಯದ ಅರಿತು ಸ್ಥಳದಿಂದ ಓಡಿ ಜೋಸೆಫ್ ಪತ್ನಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ: ಗಣಿಯೊಳಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಇಲಾಖೆ ಟೆನೆಂಟ್ ಶಾಫ್ಟ್ ಸುತ್ತಮುತ್ತಲ ಪ್ರದೇಶವನ್ನು ಸುಪರ್ದಿಗೆ ಪಡೆದು ಯಾರೂ ಶಾಫ್ಟ್ ಬಳಿ ಆಗಮಿಸದಂತೆ ಬಂದೋಬಸ್ತ್ ಮಾಡಿದ್ದರು. 20ಕ್ಕೂ ಹೆಚ್ಚು ಆಗ್ನಿಶಾಮಕ ಸಿಬ್ಬಂದಿ ಸ್ಥಳ ಪರಿಶೀಲಿಸಿದರಲ್ಲದೆ ರಾತ್ರಿ 10 ಗಂಟೆ ನಂತರ ಕಾರ್ಯಾಚರಣೆಗೆ ಇಳಿದರು. ಗುರುವಾರ ಬೆಳಗಿನ ಜಾವ 5.30ರಲ್ಲಿ 300ರಿಂದ 400 ಅಡಿಗಳ ಆಳದಲ್ಲಿ ಸಿಲುಕಿದ್ದ ಕಂದ ಹಾಗೂ ಜೋಸೆಫ್ ಡಿಸೋಜ ದೇಹ ಹೊರ ತೆಗೆದಿದ್ದಾರೆ. ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದರೂ ಪ್ರಯೋಜನವಾಗಲಿಲ್ಲ. ಬೆಂಗಳೂರಿನಿಂದ ಪರಿಣಿತರನ್ನು ಕರೆಸಿ ಸಂಜೆಯವರೆಗೂ ಕಾರ‌್ಯಾಚರಣೆ ನಡೆಸಿದರೂ ಸಫಲತೆ ಕಾಣಲಿಲ್ಲ. ಮರಣೋತ್ತರ ಪರೀಕ್ಷೆ: ಕೋಲಾರದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಮೃತ ಜೋಸೆಫ್ ಡಿಸೋಜಾ ಹಾಗೂ ಕಂದ ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಕ್ಕೆ ಶವ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ಜೋಸೆಫ್ ಪತ್ನಿ ಸಂಗೀತಾ ಮಾರಿಕುಪ್ಪಂ ಠಾಣೆಯಲ್ಲಿ ದೂರು ನೀಡಿದ್ದು, ಪತಿಯ ಸಾವಿಗೆ ರಿಚರ್ಡ್, ವಿಕ್ಟರ್ ಕಾರಣವೆಂದು ಆಪಾದಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಎಂದು ಬಿಂಬಿಸಿಕೊಂಡಿರುವ ರಿಚರ್ಡ್ ತಲೆಮರೆಸಿಕೊಂಡಿದ್ದಾನೆ. ಗುಪ್ತಚರ ವೈಫಲ್ಯ: ಟೆನೆಂಟ್ ಶಾಫ್ಟ್ ಪಕ್ಕ ಮಾರಿಕುಪ್ಪಂ ಠಾಣೆ, ಎಸ್ಪಿ ಕಚೇರಿ, ಆಂಡ್ರಸನ್‌ಪೇಟೆ ಠಾಣೆಗಳಿದ್ದರೂ ಚಿನ್ನದ ಅದಿರು ಕಳ್ಳತನಕ್ಕೆ ಕಳ್ಳರು ಪ್ರಯತ್ನ ನಡೆಸಿರುವುದರಿಂದ ಗುಪ್ತಚರ ಇಲಾಖೆಯ ವೈಫಲ್ಯ ಕಾರಣವೇ ಎಂಬ ಗುಮಾನಿ ನಾಗರಿಕರ ವಲಯದಲ್ಲಿ ಕಾಡುತ್ತಿದೆ. ಗುತ್ತಿಗೆ ಅವಧಿ ಪೂರ್ಣ: ಬಿಜಿಎಂಎಲ್ ಕಾರ್ಖಾನೆ ಆಸ್ತಿ ಸಂರಕ್ಷಣೆಗಾಗಿ ಖಾಸಗಿ ಭದ್ರತಾ ಕಂಪನಿಗೆ ನೀಡಲಾಗಿದ್ದ ಅವಧಿ ಪೂರ್ಣಗೊಂಡು ತಿಂಗಳು ಕಳೆದಿದ್ದರೂ ಇನ್ನೂ ನವೀಕರಣಗೊಳಿಸುವ ಪ್ರಕ್ರಿಯೆ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಚಿನ್ನದ ಅದಿರಿಗಾಗಿ ಕಳ್ಳರು ಗಣಿಯೊಳಗೆ ಇಳಿಯಲು ಭದ್ರತಾ ಸಿಬ್ಬಂದಿ ಜತೆಗಿನ ಬಾಂಧವ್ಯವೂ ಕಾರಣ ಎಂಬುದು ಈ ಹಿಂದಿನ ಹಲವು ಘಟನೆಗಳಲ್ಲೂ ಗುಟ್ಟಾಗಿ ಉಳಿದಿಲ್ಲ. ಕಾರ್ಮಿಕ ಮುಖಂಡ ದೂರು: ಈ ಭಾಗದಲ್ಲಿ ಅದಿರಿನ ಕಳವು ನಿರಂತರ ನಡೆಯುತ್ತಿದೆ. ಬಿಜಿಎಂಎಲ್ ಭದ್ರತೆ ಸಂಬಂಧ ಖಾಸಗಿ ಕಂಪನಿಗೆ ನೀಡಲಾಗಿದ್ದ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ಇನ್ನೂ ಬದಲಾವಣೆ ಮಾಡದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಸತ್ಯಾಂಶ ಹೊರ ಬರಬರಲು ಸಿಬಿಐ ತನಿಖೆ ನಡೆಸಬೇಕು ಎಂದು ಗಣಿ ಕಾರ್ಮಿಕ ಸಂಘಟನೆ ಮುಖಂಡ ಜಯಕುಮಾರ್ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿಗೆ ಇ-ಮೇಲ್ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಸಚಿವರು ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೇ 15ರಂದು ಉನ್ನತ ಮಟ್ಟದ ಅಧಿಕಾರಿಗಳ ತಂಡ ಕೆಜಿಎಫ್ ನಗರಕ್ಕೆ ಭೇಟಿ ನೀಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜೋಸೆಫ್ ಪತ್ನಿ ದೂರಿನ ಮೇಲೆ ಕೇಸು ದಾಖಲಿಸಿಕೊಂಡಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದ್ದು, ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಹಮದ್ ಸುಜೀತಾ, ಎಸ್ಪಿ ಕೆಜಿಎಫ್