46ಲಕ್ಷ ರೂ. ಮೌಲ್ಯದ ಚಿನ್ನದ ಕಾಯಿನ್ ವಶ

Gold vvani
Published on

ಉಡುಪಿ: ಅಕ್ರಮವಾಗಿ ಚಿನ್ನದ ಕಾಯಿನ್ ಸಾಗಾಟ ಮಾಡುತ್ತಿದ್ದ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಫೆ.26ರಂದು ಬೆಳಗ್ಗೆ 11ಗಂಟೆಗೆ ಕುಂದಾಪುರ ವಡೇರಹೋಬಳಿಯ ಪ್ರಭು ಪೆಟ್ರೋಲ್ ಬಂಕ್ ಸಮೀಪ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಭಟ್ಕಳ ನಿವಾಸಿಗಳಾದ ಮುಹಮ್ಮದ್ ಕಾಸಿಮ್ (25), ಉಮೈರ್ ಅಹ್ಮದ್(32), ಮುಝಮ್ಮಿಲ್(38), ಜಮೀಲ್ (42), ವಾಸಿಫ್ ಅಹಮದ್(27), ಮೀರಾ ಸಮೀರ್(34), ನವೀದ್(23), ಮಹಮ್ಮದ್ ಖಲೀಲ್ ಕಝಿಯಾ(62), ಮುಹ್ಮಮದ್ ಆಸೀಮ್(23), ಫೈಝೆ ಅಹಮದ್ ಮಾವನ್(29), ಮುಹಮ್ಮದ್ ಆದ್ನಾನ್(25) ಬಂಧಿತರು. ಇವರು ದುಬೈನಿಂದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದರು. ಅಲ್ಲಿಂದ ಎರಡು ಟವೇರ ಕಾರಿನಲ್ಲಿ ಭಟ್ಕಳಕ್ಕೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ದೊರೆತ ಮಾಹಿತಿಯಂತೆ ಎಸ್ಪಿ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶನದಂತೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹಾಗೂ ಉಡುಪಿ ಡಿವೈಎಸ್ಪಿ ಜೈಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 46ಲಕ್ಷ ರೂ. ಮೌಲ್ಯದ ಒಟ್ಟು 1152.47ಗ್ರಾಂ.ತೂಕದ ಚಿನ್ನದ ಕಾಯಿನ್ ಹಾಗೂ 10ಲಕ್ಷ ರೂ. ಮೌಲ್ಯದ ಎರಡು ಟವೇರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಮಂಗಳೂರು ಕಮಿಷನರ್ ಆಫ್ ಕಸ್ಟಮ್‌ಗೆ ಹಸ್ತಾಂತರಿಸಲಾಗಿದೆ.

ಇನ್ನಿಬ್ಬರು ವಶಕ್ಕೆ: ಪ್ರತ್ಯೇಕ ಪ್ರಕರಣದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ನಾಯಕ್ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರಿನಿಂದ ಭಟ್ಕಳಕ್ಕೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಿಂದ 9ಲಕ್ಷ ರೂ. ಮೌಲ್ಯದ 231 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net