

ಕಾಸರಗೋಡು: ಕಾರು ತಡೆದು ಚಾಕು ತೋರಿಸಿ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆಗೈದ ಪ್ರಕರಣದ ಮುಖ್ಯ ಆರೋಪಿ ಅಡ್ಕ ವೀರನಗರ ನಿವಾಸಿ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ ಎಂಬಾತನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊರತ್ತಣೆಯಲ್ಲಿ ಅ.18ರಂದು ಕಾರಿನಲ್ಲಿ ಸಂಚರಿಸುತ್ತಿದ್ದ ಕೋಳಿ ಅಂಗಡಿ ವಾಲೀಕ ಸೀತಾರಾಮ ಶೆಟ್ಟಿ ಯಾನೆ ಸ್ವಾಲಿತ್ ಅವರನ್ನು ಮನೆಗೆ ತೆರಳುತ್ತಿದ್ದ ಹಾದಿ ಮಧ್ಯೆ ತಂಡವೊಂದು ತಡೆದು ಚಿನ್ನದ ಸರ ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಸೀತಾರಾಮ ಶೆಟ್ಟಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿದ ಪೊಲೀಸರು ಮುಖ್ಯ ಆರೋಪಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಬೇರೆ ಹಲವು ಪ್ರಕರಣಗಳಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಈತ ಇತ್ತೀಚೆಗಷ್ಟೇ ಮಂಗಳೂರಿನ ಜೈಲಿಂದ ಬಿಡುಗಡೆಗೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.