

ಧಾರವಾಡ: ಮೂರ್ಛೆ ಬರುವ ಚಾಕಲೇಟ್ ತಿನ್ನಿಸಿ ಬಂಗಾರದ ಚೈನ್ ಕಳ್ಳತನ ಮಾಡಿದ್ದ ಆರೊಪಿಯನ್ನು ಶಹರ ಠಾಣೆ ಪೊಲೀಸರು ಬಂಽಸಿದ್ದಾರೆ.
ನಗರದ ಶ್ರೀನಿವಾಸ ಚಿತ್ರಮಂದಿರದ ಬಳಿ ವ್ಯಕ್ತಿಯೊಬ್ಬನಿಗೆ ಮತ್ತು ಬರುವ ಚಾಕಲೇಟ್ ತಿನ್ನಿಸಿ ಕೊರಳಲ್ಲಿದ್ದ ಬಂಗಾರದ ಚೈನ್ ಕಳ್ಳತನವಾದ ದೂರು ದಾಖಲಾಗಿತ್ತು. ಬಂಗಾರದ ಆಭರಣಗಳನ್ನು ಧರಿಸಿದ ವ್ಯಕ್ತಿಯನ್ನು ಟಾರ್ಗೆಟ್ ಮಾಡಿದ್ದ ಆರೋಪಿ, ಅವರೊಂದಿಗೆ ಮಾತನಾಡಿ ವಿಶ್ವಾಸ ಗಳಿಸಿ ರಾಸಾಯನಿಕ ಬೆರಸಿದ ಚಾಕಲೇಟ್ ಕೊಟ್ಟಿದ್ದ. ಚಾಕಲೇಟ್ ತಿಂದ ವ್ಯಕ್ತಿ ಮೂರ್ಛೆ ಹೋದ ನಂತರ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ.
ಪ್ರಕರಣ ಭೇದಿಸಲು ಶಹರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ನಾಗೇಶ ಕಾಡದೇವರಮಠ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣದ ಜಾಡು ಬೆನ್ನಟ್ಟಿದ ತಂಡವು ಬಿಹಾರ ಮೂಲದ ಆರೋಪಿಯನ್ನು ಪತ್ತೆ ಮಾಡಿ ಕಳ್ಳತನವಾಗಿದ್ದ 75,000 ರೂ. ಮೌಲ್ಯದ ಬಂಗಾರದ ಚೈನ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.