

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಶುಭಸಮಾರಂಭಗಳಿಗೆ ಹೆಚ್ಚು ಪ್ರಶಸ್ತ ಎನಿಸಿರುವ ಅಕ್ಷಯ ತೃತೀಯ ದಿನವಾದ ಮೇ 10 ಶುಕ್ರವಾರದಂದು ಜಿಲ್ಲೆಯ ಹಲವು ಕಡೆಗಳಲ್ಲಿ ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮಗಳು ಹೆಚ್ಚು ನಡೆದವು. ಮುಖ್ಯವಾಗಿ ಒಡವೆ ಅಂಗಡಿಗಳಲ್ಲಿ ಗ್ರಾಹಕರ ಸಾಲು ಕಂಡುಬಂತು.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಮುನ್ನೆಲೆಗೆ ಬಂದಿರುವ ಅಕ್ಷಯ ತೃತೀಯ ಪ್ರಮುಖವಾಗಿ ಚಿನ್ನಾಭರಣ ಖರೀದಿ ವಿಷಯದಲ್ಲಿ ಹೊಸ ಟ್ರೆಂಡ್ ಆಗಿದೆ. ಬಡ. ಮಧ್ಯಮ ವರ್ಗದವರ ಪಾಲಿಗೆ ಈ ಶುಭದಿನ ಹೆಚ್ಚು ಆಪ್ತವೆನಿಸಿದ್ದು, ಒಂದೆರೆಡು ಗ್ರಾಂ ಚಿನ್ನವನ್ನಾದರೂ ಖರೀದಿ ಮಾಡಲೇಬೇಕು ಎಂಬ ಟ್ರೆಂಡ್ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಪ್ರದೇಶಗಳಲ್ಲಿನ ಒಡವೆ ಅಂಗಡಿಗಳಲ್ಲಿ ಶುಕ್ರವಾರ ಭರ್ಜರಿ ವಹಿವಾಟು ನಡೆದಿದೆ.
ಬೆಲೆ ಏರಿಕೆ ನಡುವೆಯೂ ಖರೀದಿ ಜೋರು: ಕಳೆದ ನಾಲ್ಕೈದು ತಿಂಗಳಿಂದ ಚಿನ್ನದ ದರ ಗಗನಮುಖಿಯಾಗಿದೆ, ಬೆಲೆ ಏರಿಕೆ ನಡುವೆಯೂ ಗ್ರಾಹಕರ ಖರೀದಿ ಭರಾಟೆ ಕಂಡುಬಂತು. ಬಹುತೇಕ ಅಂಗಡಿಗಳಲ್ಲಿ ಚಿನ್ನದ ನಾಣ್ಯ (ಗೋಲ್ಡ್‌ಕಾಯಿನ್) ಹೆಚ್ಚು ಖರೀದಿಯಾಗಿದೆ ಎನ್ನಲಾಗಿದೆ. ಮುಂಜಾನೆಯಿಂದಲೆ ಒಡವೆ ಅಂಗಡಿಗಳತ್ತ ಹೆಜ್ಜೆ ಹಾಕಿದ ಗ್ರಾಹಕರು ಇಷ್ಟಪಟ್ಟ ಚಿನ್ನಾಭರಣ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶುಕ್ರವಾರ ಹಲವು ಮಳಿಗೆಗಳು ರಾತ್ರಿ 11 ಗಂಟೆವರೆಗೆ ವಹಿವಾಟು ನಡೆಸಿದವು. ರಾತ್ರಿಯಾದರೂ ಗ್ರಾಹಕರ ಸಂಖ್ಯೆ ಕರಗಿರಲಿಲ್ಲ.
ಲಕ್ಷ್ಮೀ ಪೂಜೆಗೆ ಪ್ರಾಶಸ್ತ್ಯ: ಅಕ್ಷಯ ತೃತೀಯ ದಿನದಂದು ಹೊಸದಾಗಿ ಖರೀದಿಸಿದ ಬಂಗಾರದ ಒಡವೆಯನ್ನು ಲಕ್ಷ್ಮಿ ದೇವಿ ಮುಂದೆ ಇಟ್ಟು ಪೂಜೆ ಸಲ್ಲಿಸಿದರೆ ಅಂಥ ಮನೆಗಳಲ್ಲಿ ಬಂಗಾರ ಮತ್ತಷ್ಟು ವೃದ್ಧಿಯಾಗುತ್ತದೆ ಎಂಬುದು ಜನರ ನಂಬಕೆಯಾಗಿದೆ. ಲಕ್ಷ್ಮೀದೇವಿ ಕೃಪೆಯಿಂದ ಸಿರಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏನಾದರೂ ಸರಿ ಸಣ್ಣ ಮಟ್ಟದಲ್ಲಾದರೂ ಚಿನ್ನ ಖರೀದಿಸಬೇಕೆಂಬ ಆಸೆ ಸಾಮಾನ್ಯವಾಗಿದೆ. ಅದರಲ್ಲೂ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ಅಕ್ಷಯ ತೃತೀಯ ಅಚ್ಚುಮೆಚ್ಚಿನ ದಿನ ಎನಿಸಿದೆ. ಪ್ರತಿ ವರ್ಷ ವೈಶ್ಯಕ ಮಾಸದಲ್ಲಿ ಮಹಿಳೆಯರಿಗೆ ಅಚ್ಚುಮೆಚ್ಚಿನ ಚಿನ್ನವನ್ನು ತನ್ನದಾಗಿಸಿಕೊಳ್ಳುವ ಸಡಗರ ಸಂಭ್ರಮದ ಹಬ್ಬವಾಗಿ ಆಚರಣೆಗೆ ಬಂದಿದೆೆ.
ಬಟ್ಟೆ ಅಂಗಡಿ, ಗೃಹಬಳಕೆ ಮಳಿಗೆಗಳೂ ರಶ್: ಇನ್ನು ಚಿನ್ನಾಭರಣ ಖರೀದಿ ಒಂದೆಡೆಯಾದರೆ ಮನೆಗೆ ಹೊಸ ವಸ್ತು ಖರೀದಿ ಮಾಡುವುದು ಮತ್ತೊಂದು ಟ್ರೆಂಡ್ ಆಗಿದೆ. ಈ ಹಿನ್ನೆಲೆಯಲ್ಲಿ ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆಗಳಲ್ಲೂ ಗ್ರಾಹಕರು ಶುಕ್ರವಾರ ತುಂಬಿ ತುಳುಕುತ್ತಿದ್ದರು. ಇನ್ನು ಹೊಸ ಬಟ್ಟೆ ಖರೀದಿ ಹಬ್ಬ ಆಚರಿಸುವ ಸಂಪ್ರದಾಯ ಅರಂಭವಾಗಿದ್ದು, ಮಹಿಳೆಯರು ಹಾಗೂ ಮಕ್ಕಳ ಬಟ್ಟೆ ಅಂಗಡಿಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಂಗಾರ ಇದ್ದರೆ ಭದ್ರ: ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ ಎಂಬ ಕಾರಣಕ್ಕೆ ಬಹುತೇಕ ಬಡ, ಮಧ್ಯಮ ವರ್ಗದ ಜನ ಚಿನ್ನಾಭರಣ ಖರೀದಿಗೆ ಹೆಚ್ಚು ಉತ್ಸುಕತೆ ತೋರಿಸುತ್ತಾರೆ. ಮನೆಯಲ್ಲಿ ಬಂಗಾರ ಇದ್ದರೆ ಭದ್ರತಾ ಭಾವನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹಿಂದಿನಿಂದಲೂ ಜನ ಚಿನ್ನಾಭರಣ ಖರೀದಿ ಮಾಡುವತ್ತ ಆಸಕ್ತಿ ತೋರಿಸುತ್ತಾ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯ ದಿನ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದು ಚಿನ್ನಾಭರಣ ಖರೀದಿ ಮಾಡುವ ಮನಸ್ಸಿನವರಿಗೆ ಇದೊಂದು ಒಳ್ಳೆಯ ವೇದಿಕೆಯಂತಾಗಿದೆ. ಗ್ರಾಮೀಣ ಪ್ರದೇಶದ ಗಿರವಿ ಅಂಗಡಿಗಳಿಂದ ಹಿಡಿದು ಬ್ಯಾಂಕ್ ಶೇರು ಮಾರುಕಟ್ಟೆಯಲ್ಲಿನ ಏರುಪೇರುಗಳುಗಳಿಗೂ ಸಹ ಚಿನ್ನದ ಬೆಲೆ ಮಾನದಂಡವಾಗಲಿದೆ. ದೇಶದಲ್ಲಿ ನೋಟುಗಳನ್ನು ಮುದ್ರಿಸಲು ಸಹ ಇಂತಿಷ್ಟು ಬಂಗಾರವನ್ನು ಕೇಂದ್ರ ಸರ್ಕಾರ ಸಂಗ್ರಹಿಸಬೇಕು ಎಂಬ ನಿಯಮವು ಇದೆ ಹಾಗಾಗಿ ಬಂಗಾರ ಎಂದರೆ ಎಲ್ಲರಿಗೂ ಅಷ್ಟೊಂದು ಪ್ರೀತಿಯಾಗಿದೆ.
ವಿವಾಹ ಸಮಾರಂಭ, ಆಸ್ತಿ ಖರೀದಿ, ಅನಾರೋಗ್ಯಸಂದರ್ಭ, ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಸೇರಿ ಈ ರೀತಿಯ ವಿವಿಧ ಕಾರಣಗಳಿಂದ ಬಂಗಾರ ಇದ್ದರೆ ಯಾರನ್ನೂ ಬೇಡುವ ಪ್ರಮಯವೇ ಬರುವುದಿಲ್ಲ ಒಡವೆಯನ್ನು ಅಪತ್ಕಾಲದಲ್ಲಿ ಗಿರಿವಿ ಇಟ್ಟು ಹಣದ ಸಹಾಯ ಪಡೆಯಬಹುದು ಎಂಬುದು ಸಾಮಾನ್ಯ ಜನರ ಲೆಕ್ಕಾಚಾರ ಈ ಹಿನ್ನೆಲೆಯಲ್ಲಿ ಚಿನ್ನಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಕುದುರಿದೆ. ಇದರ ನಡುವೆ ಬಂಗಾರದ ಬೆಲೆ ಗಗನಮುಖಿಯಾಗಿರುವುದರಿಂದ ಬಡವರ್ಗದ ಜನರಲ್ಲಿ ಚಡಪಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಚಿನ್ನಾಭರಣ ಖರೀದಿ ಮಾಡದಿದ್ದರೂ ಕನಿಷ್ಟ ಒಂದೆರಡು ಗ್ರಾಂನಷ್ಟು ಚಿನ್ನದ ನಾಣ್ಯ ಖರೀದಿಸಿದರೂ ಸಾರ್ಥಕ ಎಂಬ ಭಾವನೆಯಲ್ಲಿ ಜನ ಚಿನ್ನದ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ.
ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದು ನಮ್ಮಶಕ್ತಿಗೆ ಅನುಸಾರ ಚಿನ್ನಾಭರಣ ಖರೀದಿ ಮಾಡುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದೇವೆ. ಇದಕ್ಕಾಗಿ ಹಣ ಕೂಡಿಡುತ್ತೇವೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿ ಲಕ್ಷ್ಮಿದೇವಿ ಮುಂದಿಟ್ಟು ಪೂಜೆ ಸಲ್ಲಿಸಿದರೆ ಏನು ಸಂತೃಪ್ತ ಭಾವನೆ ಮೂಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಏರಿಕೆಯಾಗುತ್ತಿರುವುದರಿಂದ ಖರೀದಿ ಮಾಡಲು ಹಿಂಜರಿಕೆಯಾಗುತ್ತಿದೆ.
ಶಶಿಕಲಾ, ಗೃಹಿಣಿ ದೊಡ್ಡಬಳ್ಳಾಪುರ
ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿ ಟ್ರೆಂಡ್ ಸಾಕಷ್ಟು ಸದ್ದು ಮಾಡುತ್ತಿದೆ. ಅಂದಿನ ದಿನ ಹೆಚ್ಚು ಗ್ರಾಹಕರು ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಕಡೆಯಿಂದಲೂ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತೇವೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ವಿನ್ಯಾಸದ ಚಿನ್ನಾಭರಣ ಜತೆಗೆ ಗೋಲ್ಡ್ ಕಾಯಿನ್‌ಗಳ ಮಾರಾಟ ಹೆಚ್ಚು ನಡೆಯುತ್ತದೆ
ರಾಜೇಶ್, ಜ್ಯುವೆಲರಿ ಅಂಗಡಿ ಮಾಲೀಕ ಹೊಸಕೋಟೆ