

ಹುಬ್ಬಳ್ಳಿ: ಮುಂಬೈ ಮೂಲದ ವ್ಯಾಪಾರಿಯೊಬ್ಬ ಚಿನ್ನದ ಬಿಸ್ಕತ್ ಕೊಡುವುದಾಗಿ ನಂಬಿಸಿ ತನ್ನ ಬ್ಯಾಂಕ್ ಖಾತೆಗೆ 20.15 ಲಕ್ಷ ರೂ. ಆರ್ಟಿಜಿಎಸ್ ಮಾಡಿಸಿಕೊಂಡು ಸ್ಥಳೀಯ ಚಿನ್ನದ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
ಕೇಶ್ವಾಪುರ ಕುಸುಗಲ್ಲ ರಸ್ತೆ ಪಾಟೀಲ ಅವೆನ್ಯೂ ಅಪಾರ್ಟ್ವೆುಂಟ್ ನಿವಾಸಿ ಸಮೀರ ಪಾರಸಮಲ ಜೈನ್ ವಂಚನೆಗೀಡಾದವರು. ಮುಂಬೈ ಠಾಣಾ ಮೂಲದ ರಾಜು ಪವಾರ ಮತ್ತು ನಿತೀಶ ಜೈನ್ ವಂಚಿಸಿದ ಆರೋಪಿಗಳು.
ಸಮೀರ ಅವರಿಗೆ ರಾಜು ಪವಾರನ ಪರಿಚಯ ಈ ಮೊದಲೇ ಇತ್ತು. ರಾಜು ಕಡೆಯಿಂದ ಪರಿಚಯವಾದ ನಿತೀಶ ಅವರಿಂದ ಸಮೀರ ನವೆಂಬರ್ನಲ್ಲಿ 500 ಗ್ರಾಂ ಚಿನ್ನದ ಬಿಸ್ಕತ್ ಖರೀದಿಸಿದ್ದರು. ನಂತರ ಮತ್ತೊಮ್ಮೆ ಆರ್ಟಿಜಿಎಸ್ ಮೂಲಕ ಹಣ ಜಮೆ ಮಾಡಿ ಚಿನ್ನ ಖರೀದಿಸಿದ್ದರು. ಅದೇ ನಂಬಿಕೆಯಿಂದ ಮೂರನೇ ಬಾರಿಗೆ ಡಿ. 15ರಂದು 20.15 ಲಕ್ಷ ರೂ. ಆರ್ಟಿಜಿಎಸ್ ಮೂಲಕ ನಿತೀಶ ಜೈನ್ ಹೇಳಿದ ಫೆಡರಲ್ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದರು. ಚಿನ್ನ ತರಲು ಮುಂಬೈಗೆ ತೆರಳಿದಾಗ ಅಂಗಡಿ ಮುಚ್ಚಿತ್ತು. ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಸಮೀರ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ ಎಂದು ಕೇಶ್ವಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.