

ಮೈಸೂರು: ರಾಜ್ಯ ಕಿಕ್ ಬಾಕ್ಸಿಂಗ್ ಸಂಸ್ಥೆಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕೆಡೆಟ್ ಜ್ಯೂನಿಯರ್, ಸೀನಿಯರ್, ಮಾಸ್ಟರ್ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ನಗರದ ಎಸ್.ಬೀಬಿ ಫಾತಿಮಾ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ ಎಂದು ಲೈಂಗಿಕ ಅಲ್ಪ ಸಂಖ್ಯಾತ ಅಕ್ರಂ ಪಾಷಾ ಅಲಿಯಾಸ್ ಶಬಾನ ತಿಳಿಸಿದರು.
ದತ್ತು ಪಡೆದು 12 ವರ್ಷದಿಂದ ಬೀಬಿ ಫಾತಿಮಾಳನ್ನು ಸಾಕುತ್ತಿದ್ದೇವೆ. ಆಕೆ ಕ್ರೀಡೆಯಲ್ಲಿ ಮುಂದುವರಿಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದ್ದು, ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿಕ್ಷಣ ಕೊಡಿಸುತ್ತಿರುವುದಲ್ಲದೆ, ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲೆಂದು ಕಿಕ್ ಬಾಕ್ಸಿಂಗ್ ತರಬೇತಿಗೆ ಕಳುಹಿಸಿದ್ದು, ಈಕೆ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅನೇಕ ಪದಕ ಗಳಿಸಿದ್ದಾಳೆ. ಮುಂದೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಬೇಕೆಂಬ ಆಕಾಂಕ್ಷೆ ಇದೆ. ತಮ್ಮ ಈ ಕಾರ್ಯ ಗಮನಿಸಿ ಹಲವರು ನೆರವಾಗುತ್ತಿರುವುದು ಸಂತಸ ತಂದಿದೆ ಎಂದರು.
ಬಾಲಕಿ ಎಸ್.ಬೀಬಿ ಫಾತಿಮಾ, ಲೈಂಗಿಕ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಪ್ರಣತಿ ಪ್ರಕಾಶ್ ಇದ್ದರು.