

ಗೊಳಸಂಗಿ: ಲೀಲಾಜಾಲದ ಮೂಲಕ ಪವಾಡ ಪುರುಷರು ಎಂದೆನಿಸಿದ ಹಿರೇ ಆಸಂಗಿಯ ಅಖಂಡೇಶ್ವರರ ಜಾತ್ರಾ ಮಹೋತ್ಸವ ಗೊಳಸಂಗಿ ಗ್ರಾಮದಲ್ಲಿ ಸೋಮವಾರ ಭಕ್ತಿ-ಭಾವದಿಂದ ನೆರವೇರಿತು.
ಸಿದ್ಧಿಪುರುಷ ವಾಮನಮುತ್ಯಾರವರ ಪಲ್ಲಕ್ಕಿ ಉತ್ಸವವನ್ನು ಪಪೂ ಅಖಂಡೇಶ್ವರರ ದಿವ್ಯ ನೇತೃತ್ವದಲ್ಲಿ ಪರಮಭಕ್ತ ಈರಪ್ಪ ಮಲ್ಲಪ್ಪ ಬಡಿಗೇರ ಅವರ ಮನೆಯಿಂದ ಶ್ರೀಮಠದವರೆಗೆ ಸೋಮವಾರ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯುದ್ದಕ್ಕೂ ಪುರವಂತರಾದ ಆನಂದ ಬಡಿಗೇರ, ಸುರೇಶ ಬಡಿಗೇರ, ಈರಪ್ಪ ಬಡಿಗೇರ, ಚಿದಾನಂದ ಬಡಿಗೇರ, ಗುರುರಾಜ ಹೆಬ್ಬಾಳ, ಮಂಜುನಾಥ ಹೆಬ್ಬಾಳ ಅವರ ವೀರಗಾಸೆ, ಮುತ್ತೈದೆಯರ ಕಲಶದಾರತಿ ಅಪಾರ ಭಕ್ತರ ಮನಸೂರೆಗೊಂಡಿತು.
ಶ್ರೀಮಠಕ್ಕೆ ಪಲ್ಲಕ್ಕಿ ಬಂದನಂತರ ಪಪೂ ಅಖಂಡೇಶ್ವರರು ಅಸಂಖ್ಯಾತ ಭಕ್ತರಿಗೆ ಸಂಪ್ರದಾಯದಂತೆ ಬೀಜದಾನ ಮಾಡಿದರು. ಬಳಿಕ ನಡೆದ ಅನ್ನ ಸಂತರ್ಪಣೆಯಲ್ಲಿ ಗೊಳಸಂಗಿಯೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿದ್ದರು. ಮುಖಂಡರಾದ ಶಂಕ್ರಪ್ಪ ಮುತ್ತಗಿ, ವೈ.ಎಸ್.ಪಾಟೀಲ, ಮನೋಹರ ಪತ್ತಾರ, ತಿರಕಪ್ಪ ಕುಪ್ಪಸ್ತ, ದುಂಡಪ್ಪ ಕಾಳಗಿ, ಸಂಗಪ್ಪ ಕೋಲಾರ, ದುಂಡಪ್ಪ ಕಡಿ, ಯಮನಪ್ಪ ಹವೇಲಿ, ಚಂದು ಸಿಂದಗಿ, ಚನ್ನಮಲ್ಲ ಗುಡ್ಡದ ಉಪಸ್ಥಿತರಿದ್ದರು.