ಸ್ಥಾವರಕ್ಕೆ ಮಾ.7ರವರೆಗೆ ಮೌಖಿಕ ಗಡುವು

GLS-14-1A
Published on

ಗೊಳಸಂಗಿ: ಮುಂಬರುವ ಮಾ.7 ರೊಳಗಾಗಿ ಕೂಡಗಿ ಎನ್‌ಟಿಪಿಸಿ ಸ್ಥಾವರದ ಹಿರಿಯ ಅಧಿಕಾರಿಗಳು ಈ ಭಾಗದ ಐದೂ ಹಳ್ಳಿಯ ಗ್ರಾಮಸ್ಥರು ಮತ್ತು ರೈತರೊಂದಿಗೆ ಮಾತುಕತೆಗೆ ಮುಂದಾಗಬೇಕು. ಇಲ್ಲದಿದ್ದರೆ ಮಾ.7 ರಂದು ಇದೇ ಸ್ಥಳದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದೆಂದು ಎನ್‌ಟಿಪಿಸಿ ಸಂತ್ರಸ್ತ ರೈತರ ಹಿತರಕ್ಷಣಾ ಸಮಿತಿ ಒಮ್ಮತದ ತೀರ್ಮಾನ ತೆಗೆದುಕೊಂಡಿತು.

ಸಮೀಪದ ತೆಲಗಿ 18 ನೇ ಕ್ರಾಸ್ ಬಳಿಯ ಬಹುಹಳ್ಳಿ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಆವರಣದಲ್ಲಿ ಭಾನುವಾರ ಸಭೆ ಸೇರಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಭೆಗೂ ಮುಂಚೆ ಇತ್ತೀಚೆಗೆ ನಿಧನರಾದ ರೈತ ಮುಖಂಡರಾದ ಅಶೋಕ ಪಾಟೀಲ, ವಿಜುರಾಯ ಬೆಟಗೇರಿ, ಮುರುಗೇಶ ಹೆಬ್ಬಾಳ, ಸಿದ್ದಪ್ಪ ಮಿಣಜಗಿ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬಳಿಕ ಎನ್‌ಟಿಪಿಸಿ ಸಂತ್ರಸ್ತ ರೈತರ ಹಿತರಕ್ಷಣಾ ಸಮಿತಿಗೆ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಸಿ.ಪಿ.ಪಾಟೀಲ, ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಜಿ. ಕಮತಗಿ ಅವರನ್ನು ನೇಮಿಸುವ ಜತೆಗೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಎಸ್.ಎಸ್. ಗರಸಂಗಿ ಅವರನ್ನು ಮುಂದುವರಿಸಲು ಸಭೆ ಅನುಮೋದಿಸಿತು.

ರೈತ ಮುಖಂಡರಾದ ಸಿ.ಎಂ. ಹಂಡಗಿ, ಮೋಯೂದ್ದೀನ್ ಸಾಬ ಗಡೇದ, ಪ್ರೇಮಕುಮಾರ ಮ್ಯಾಗೇರಿ, ಡಾ.ವೈ.ಕೆ. ಹೂಗಾರ, ಎಸ್. ಜಿ.ವಸ್ತ್ರದ, ದೇವೇಂದ್ರ ಬಳಮಕರ, ಅಮರೇಶಗೌಡ ಪಾಟೀಲ, ಬಾಬು ಬೀಳಗಿ ಮತ್ತಿತರರಿದ್ದರು. ಬಾಧಿತ ಗ್ರಾಮಗಳಾದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ, ಮುತ್ತಗಿ ಗ್ರಾಮಗಳ ರೈತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಸಭೆಯ ನಿರ್ಣಯಗಳು
ಕೂಡಗಿ ಎನ್‌ಟಿಪಿಸಿಯ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನವನ್ನು ಬೇರೆ ಕ್ಷೇತ್ರಕ್ಕೆ ನೀಡದಿರುವುದು ಮತ್ತು ಈಗಾಗಲೇ ಧಾರವಾಡ ಜಿಲ್ಲೆಗೆ ನೀಡಿದ 5 ಕೋಟಿ ರೂ. ಅನುದಾನವನ್ನು ಮರಳಿ ಪಡೆಯುವುದು, ಬೇಕಾಬಿಟ್ಟಿಯಾಗಿ ನಡೆಸುತ್ತಿರುವ ವಿಲೇಜ್ ಡೆವಲಪ್‌ಮೆಂಟ್ ಆರ್ಗನೈಸೇಷನ್ ಕಮಿಟಿ (ವಿಡಿಎಸಿ) ಸಭೆಯನ್ನು ಪೂರ್ವ ನಿಗದಿಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ನಡೆಸುವುದು, ಬಾಧಿತ ಐದು ಹಳ್ಳಿಗರಿಗೆ ನಿರಂತರ ಉಚಿತ ವಿದ್ಯುತ್ ಪೂರೈಕೆ ಮಾಡುವುದು, ಸ್ಥಾವರದ ನಿರ್ಮಾಣಕ್ಕಾಗಿ ಈಗಾಗಲೇ ಭೂಮಿ ಕಳೆದುಕೊಂಡ ಎಲ್ಲ ರೈತರಿಗೆ ಏಕರೂಪದ ಪರಿಹಾರ ನೀಡುವುದು, ಸಂತ್ರಸ್ತ ರೈತರ ಕುಟುಂಬದ ಸದಸ್ಯರೊಬ್ಬರಿಗೆ ಸ್ಥಾವರದಲ್ಲಿ ಸರ್ಕಾರಿ ನೌಕರಿ ನೀಡುವುದು, ಜವುಳು ಮತ್ತು ಹಾರುಬೂದಿಯಿಂದ ಹಾಳಾಗುತ್ತಿರುವ ಜಮೀನುಗಳನ್ನು ಸರ್ವೇ ಮಾಡಿ ಅಗತ್ಯ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಧಾರವಾಡ ಜಿಲ್ಲೆಗೆ ಎನ್‌ಟಿಪಿಸಿ ದೆಹಲಿ ಕೇಂದ್ರ ಕಚೇರಿಯಿಂದ ಅನುದಾನ ನೀಡಲಾಗಿದೆ. ಇದರಲ್ಲಿ ಕೂಡಗಿ ಘಟಕದಿಂದ ಒಂದೇ ಒಂದು ರೂಪಾಯಿ ಕೂಡ ನೀಡಿಲ್ಲ.
ಪಿ.ಎ. ಜಾನ್, ಸಾರ್ವಜನಿಕ ಸಂಪರ್ಕಾಧಿಕಾರಿ, ಎನ್‌ಟಿಪಿಸಿ ಕೂಡಗಿ ಘಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net