ಅಂಗಡಗೇರಿ ಶಾಲೆ ಮುಖ್ಯಶಿಕ್ಷಕರಿಗೆ ಕರೊನಾ

GLS-3-2A
Published on

ಗೊಳಸಂಗಿ: ಕರೊನಾ ಹಿನ್ನೆಲೆ ಬಂದ್ ಆಗಿರುವ ಶಾಲೆಗಳನ್ನು ಪುನರಾರಂಭಿಸಲು ಎಲ್ಲೆಡೆ ಒತ್ತಡ ಕೇಳಿ ಬರುತ್ತಿರುವಾಗಲೇ ಸಮೀಪದ ಅಂಗಡಗೇರಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪ್ರಬಾರ ಮುಖ್ಯಶಿಕ್ಷಕರಿಗೆ ಸೋಮವಾರ ಸೋಂಕು ತಗುಲಿದ ಸಂಗತಿ ಬೆಳಕಿಗೆ ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮಂಗಳವಾರ ಬೆಳಗ್ಗೆ ಬೀರಲದಿನ್ನಿ ಪಿಡಿಒ ಹೊಸಗೌಡರ ಇಡೀ ಶಾಲೆಗೆ ಸ್ಯಾನಿಟೈಸರ್ ಮಾಡಿಸಿದರು. ಬಳಿಕ ಬಸವನಬಾಗೇವಾಡಿ ತಾಲೂಕು ಆಸ್ಪತ್ರೆ, ವಂದಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರನ್ನೊಳಗೊಂಡಂತೆ 58 ಜನರ ಗಂಟಲು ದ್ರವ ಪರೀಕ್ಷೆ ಮಾಡಿಸಿದರು.

ಬಳಿಕ ಶಾಲೆಗೆ ನಿಡಗುಂದಿ ವಲಯದ ಶಿಕ್ಷಣ ಸಂಯೋಜಕ ವಿ.ಬಿ.ಜುಳಜುಳಿ, ಸಂಪನ್ಮೂಲ ಶಿಕ್ಷಕ ಪ್ರಭಾಕರ ಹೆಬ್ಬಾಳ ಭೇಟಿ ನೀಡಿ ಪರಿಶೀಲಿಸಿದರು. ಕರೊನಾ ಸೋಂಕಿತ ಶಿಕ್ಷಕರಿಗೆ 14 ದಿನ ಹೋಂ ಕ್ವಾರಂಟೈನ್ ಮಾಡಲು ತಿಳಿಸಿ ಪ್ರಬಾರ ಮುಖ್ಯಶಿಕ್ಷಕರ ಜವಾಬ್ದಾರಿಯನ್ನು ಸಹಶಿಕ್ಷಕ ಎಸ್.ಎಂ. ಚಿತ್ತರಗಿ ಅವರಿಗೆ ವಹಿಸಲಾಯಿತು. ಗ್ರಾಮಸ್ಥರ ಸಲಹೆಯಂತೆ ಗಂಟಲು ದ್ರವ ಪರೀಕ್ಷೆ ವರದಿ ಬರುವವರೆಗೆ ಮೂರು ದಿನ ಮಕ್ಕಳಿಗೆ ರಜೆ ಘೋಷಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಬಿದ್ನಾಳ, ಶಿಕ್ಷಕರಾದ ಕೃಷ್ಣಾ ಲಮಾಣಿ, ಉಷಾ ಎಸ್.ಡಿ., ಗೀತಾ ಕಾಖಂಡಕಿ, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಇದ್ದರು.

ಅಂಗಡಗೇರಿ ಶಾಲೆ ಶಿಕ್ಷಕರೊಬ್ಬರಿಗೆ ಕರೊನಾ ಸೋಂಕು ತಾಕಿದ್ದರೂ ಹೆಚ್ಚಿನ ಪ್ರಮಾಣದ ಲಕ್ಷಣಗಳಿಲ್ಲ. ಮುಂಜಾಗ್ರತೆ ಕ್ರಮವಾಗಿ ಶಾಲೆ ಸ್ಯಾನಿಟೈಸರ್ ಮಾಡಿಸಲಾಗಿದೆ. ಮಕ್ಕಳು, ಶಿಕ್ಷಕರ ಗಂಟಲು ದ್ರವದ ಪರೀಕ್ಷೆ ಮಾಡಿಸಲಾಗಿದೆ.
ವಿ.ಬಿ. ಜುಳಜುಳಿ
ಶಿಕ್ಷಣ ಸಂಯೋಜಕ, ನಿಡಗುಂದಿ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net