ತ್ಯಾಜ್ಯ ವಸ್ತುಗಳನ್ನು ತಿರಸ್ಕರಿಸಬೇಡಿ

GLS 31-1
Published on

ಗೊಳಸಂಗಿ: ಗ್ರಾಮದ ಬೀದಿ ಬೀದಿಗಳಲ್ಲಿ ಸಂಗ್ರಹಿಸಲಾದ ತ್ಯಾಜ್ಯ ವಸ್ತುಗಳನ್ನು ತಿರಸ್ಕರಿಸದೆ ಒಂದೆಡೆ ಸಂಗ್ರಹಿಸಿ ರೈತರ ಜಮಿನಿಗೆ ಗೊಬ್ಬರವನ್ನಾಗಿಸಿ ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಗ್ರಾಪಂ ಅಧಿಕಾರಿಗಳಿಗೆ ಸಲಹೆ ನೀಡಿದರು.
ಗ್ರಾಮದ ಗ್ರಾಪಂಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಗ್ರಾಪಂ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೂಡಗಿ ಎನ್‌ಟಿಪಿಸಿ 5 ಬಾಧಿತ ಗ್ರಾಮಗಳಿಗೆ ಕಸ ವಿಲೇವಾರಿಗೆ ವಾಹನ ನೀಡಿರುವುದು ಸ್ವಾಗತಾರ್ಹ. ಅದರ ಜತೆಗೆ ತ್ಯಾಜ್ಯ ವಸ್ತು ಸಂಗ್ರಹಣಾ ಘಟಕ ನಿರ್ಮಿಸಲು ತಲಾ 5 ಲಕ್ಷ ರೂ. ನೀಡುವಂತೆ ಸೂಚಿಸಲಾಗುವುದು ಎಂದರು.
ಎನ್‌ಟಿಪಿಸಿಯಿಂದ ಬಾಧಿತ ಗ್ರಾಮಗಳಲ್ಲಿ ಶೌಚಗೃಹ ಕಟ್ಟಿಕೊಂಡ ಲಾನುಭವಿಗಳಿಗೆ ಇದುವರೆಗೂ ಸಿಗದೆ ಇರುವಂತ 25 ಸಾವಿರ ರೂ. ಸಹಾಯಧನ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗಳ ಸೂಚಿಸಲಾಗುವುದು. ಸೀ ಸಂಘದ ಸದಸ್ಯರಿಗೆ ಸಮುದಾಯ ಬಂಡವಾಳ ನಿಧಿಯಿಂದ ತಲಾ ಒಕ್ಕೂಟಕ್ಕೆ ನೇಕಾರಿಕೆಯ ಅಭಿವೃದ್ಧಿಗಾಗಿ 20-40 ಲಕ್ಷ ರೂ., ನೀಡಲಾಗಿದ್ದು ಆ ಹಣ ಸಾರ್ಥಕಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಪಿಡಿಒ ಎಸ್.ಜೆ.ಉದಯಕುಮಾರ ಮಾತನಾಡಿ, ಗ್ರಾಮದ ಕೆಲ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಿದೆ. ಆದರೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಒಂದು ವರ್ಷದಿಂದ ಎಸ್ಟಿಮೇಟ್ ನೀಡುತ್ತಿಲ್ಲ ಎಂದು ಆರೋಪಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಂದೇನವಾಜ್ ಬಿಜಾಪುರ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಕೂಡಗಿ ಎನ್‌ಟಿಪಿಸಿ ನಿರೀಕ್ಷಿತ ಅನುದಾನ ನೀಡುತ್ತಿಲ್ಲ. ಗ್ರಾಪಂ ನೂತನ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಸೂಕ್ತ ಅನುದಾನ ಕೊಡಿ ಎಂದು ಮನವಿ ಮಾಡಿದರು.
ಗ್ರಾಪಂ ಸದಸ್ಯರಾದ ಬಸಪ್ಪಣ್ಣ ಉಳ್ಳಿ, ಮಹ್ಮದಉಮ್ಮರ ಹತ್ತರಕಿಹಾಳ, ಸಹಾಯಕ ಅಧಿಕಾರಿ ಶೇಖರ ಪವಾರ, ದುಂಡೇಶ ಮಮದಾಪೂರ, ಹನುಮಂತ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net