

ಗೊಳಸಂಗಿ: ಗ್ರಾಮದಲ್ಲಿ ದುರಸ್ತಿ ನೆಪದಲ್ಲಿ ಆರು ತಿಂಗಳಿನಿಂದ ನಿಷ್ಕ್ರಿಯವಾಗಿ ನಿಂತಿದ್ದ 108 ಆಂಬುಲೆನ್ಸ್ ವಾಹನ ಕೊನೆಗೂ ಸೆ.8 ರಿಂದ ಸಾರ್ವಜನಿಕರ ತುರ್ತು ಆರೋಗ್ಯ ರಕ್ಷಣೆಗೆ ಮುಂದಾಗಿದೆ.
ಕಳೆದ ಫೆ.26 ರಂದು ಸಂಭವಿಸಿದ್ದ ಅಪಘಾತದಿಂದಾಗಿ ದುರಸ್ತಿಗೆ ಬಂದಿದ್ದ ಗೊಳಸಂಗಿ ಪ್ರಾಥಮಿಕ ಕೇಂದ್ರ ವ್ಯಾಪ್ತಿಯ 108 ಆಂಬುಲೆನ್ಸ್ 6 ತಿಂಗಳು ಕಳೆದರೂ ಸಾರ್ವಜನಿಕರ ತುರ್ತು ಆರೋಗ್ಯ ಸೇವೆಗೆ ಮುಂದಾಗಿರಲಿಲ್ಲ. ಈ ನಡುವೆ ಗ್ರಾಮಸ್ಥರು ಸ್ಥಳೀಯ 108 ಸಿಬ್ಬಂದಿ ಸೇರಿ ಜಿಲ್ಲಾ ವ್ಯವಸ್ಥಾಪಕರ ಬಳಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಗ್ರಾಮದಲ್ಲಿ 108 ಆಂಬುಲೆನ್ಸ್ ವಾಹನ ಸಂಚಾರ ಸ್ಥಗಿತಗೊಂಡ ಕುರಿತು ಸೆ. 2 ರಂದು ‘ವಿಜಯವಾಣಿ’ಯಲ್ಲಿ ‘ತುಕ್ಕು ಹಿಡಿಯುತ್ತಿರುವ ತುರ್ತು ವಾಹನ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡು ಸಂಬಂಧಿಸಿದವರು ಒಂದೇ ಒಂದು ವಾರದಲ್ಲಿ ಆಂಬುಲೆನ್ಸ್ ವಾಹನ ಸಂಚಾರ ಆರಂಭಕ್ಕೆ ಕ್ರಮ ಕೈಗೊಂಡಿದ್ದು, ಗ್ರಾಮಸ್ಥರು ಸಂತಸಗೊಂಡಿದ್ದಾರೆ.