

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಗರದ ಗೋಕುಲ ರಸ್ತೆಯ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಒಳಚರಂಡಿ ಕೊಳವೆ ಮಾರ್ಗ (ಯುಜಿಡಿ) ಇದ್ದೂ ಇಲ್ಲದಂತಾಗಿದ್ದು, ನಿತ್ಯವೂ ನಿವಾಸಿಗಳು, ಅಂಗಡಿಕಾರರು ಹು-ಧಾ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುವಂತಾಗಿದೆ.
ಹೊಸೂರಿನಿಂದ ತಾರಿಹಾಳ ಬೈಪಾಸ್ವರೆಗೆ 7-8 ಕಿ.ಮೀ. ನಷ್ಟು ಗೋಕುಲ ರಸ್ತೆಯ ಎರಡು ಕಡೆ ಯುಜಿಡಿ ಮುಖ್ಯ ಲೈನ್ ಇಲ್ಲವೇ ಇಲ್ಲ. ಈ ರಸ್ತೆಗೆ ಸಂರ್ಪಸುವ ಗ್ರೀನ್ ಗಾರ್ಡನ್, ಮಾರುತಿನಗರ, ಬಸವೇಶ್ವರನಗರ, ನೆಹರುನಗರ, ಇತ್ಯಾದಿ ಬಡಾವಣೆಗಳಲ್ಲಿ ಇರುವ ಯುಜಿಡಿ ಕೊಳವೆ ಮಾರ್ಗ ತುಂಬಾ ಹಳೇಯದು. ಸುಮಾರು 30-40 ವರ್ಷಗಳಷ್ಟು ಹಳೆಯದಾದ ಯುಜಿಡಿ ಜಾಲವು ಇಂದಿನ ಜನಸಂಖ್ಯೆಗೆ ಸೂಕ್ತವಾಗಿಲ್ಲ.
ಕಳೆದ 10-15 ವರ್ಷಗಳಲ್ಲಿ ಗೋಕುಲ ಮುಖ್ಯ ರಸ್ತೆಯಲ್ಲಿ ಬೃಹತ್ ಮಾಲ್ಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್, ಆಸ್ಪತ್ರೆಗಳು ನಿರ್ವಣಗೊಂಡಿವೆ. ಈ ಮಾರ್ಗದಲ್ಲಿ ವಿಮಾನ ನಿಲ್ದಾಣ, ಹೊಸ ರೂಪ ಪಡೆಯುತ್ತಿರುವ ಗೋಕುಲ ಬಸ್ ನಿಲ್ದಾಣ, ಇನ್ಪೋಸಿಸ್ ಉದ್ಯಮ ಇರುವುದರಿಂದ ತ್ವರಿತವಾಗಿ ಪ್ರಗತಿ ಕಂಡಿದೆ. ಮುಖ್ಯ ರಸ್ತೆಯಲ್ಲಿಯೇ ಯುಜಿಡಿ ಇಲ್ಲದಿರುವುದರಿಂದ ಸುತ್ತಮುತ್ತಲಿನ ಬಡಾವಣೆಗಳ ಕೊಳಚೆ ನೀರು ಗಟಾರ ಮೂಲಕ ಹರಿದು ಹೊಸೂರ ಬಳಿ ನಾಲಾಗೆ ಬಂದು ಸೇರುತ್ತಿವೆ.
ಸುತ್ತಮುತ್ತಲಿನ ಬಡಾವಣೆಗಳಲ್ಲಿ 4-6 ಇಂಚು ವ್ಯಾಸದ ಒಳಚರಂಡಿ ಕೊಳವೆ ಮಾರ್ಗವಿದೆ. ಇಂದಿನ ಜನಸಾಂದ್ರತೆ ಇದು ಸಾಲುವುದಿಲ್ಲ. ಪದೇಪದೆ ಬ್ಲಾಕ್ ಆಗಿ ಅಲ್ಲಲ್ಲಿ ರಸ್ತೆ ಮೇಲೆ ಕೊಳಚೆ ನೀರು ಹರಿಯುವುದು ಸಾಮಾನ್ಯವಾಗಿದೆ. ಗಬ್ಬು ವಾಸನೆಯಿಂದ ಜನರು ಹೈರಾಣಾಗಿದ್ದಾರೆ. ಬಹುತೇಕ ಕಡೆ ಯುಜಿಡಿ ಮಾರ್ಗ ನಿಷ್ಕ್ರಿಯಗೊಂಡಿದೆ. ಗೋಕುಲ ರಸ್ತೆಗೆ ವಿಐಪಿ ರೋಡ್ ಎಂದು ಕರೆಯುವುದು ರೂಢಿಯಲ್ಲಿದೆ. ಹೀಗಿದ್ದು, ಈ ಸ್ಥಿತಿಗೆ ಯಾರು ಹೊಣೆಗಾರರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಹು-ಧಾ ಮಹಾನಗರ ಪಾಲಿಕೆ ಬಳಿಯಿರುವ ಸಕ್ಕಿಂಗ್ ಆಂಡ್ ಜಟ್ಟಿಂಗ್ ಯಂತ್ರವನ್ನು ನಿತ್ಯ ಈ ರಸ್ತೆಗೆ ಮೀಸಲಿಡುವ ಪರಿಸ್ಥಿತಿ ಎದುರಾಗಿದೆ. ಚೇಂಬರ್ ಬ್ಲಾಕ್ ಆದಾಗ ಸಾರ್ವಜನಿಕರ ದೂರಿನ ಮೇರೆಗೆ ಈ ಯಂತ್ರವನ್ನು ಪಾಲಿಕೆ ಬಳಸುತ್ತದೆ. ಮುಂಬರುವ ಮಳೆಗಾಲದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವುದು ನಿಶ್ಚಿತ.