

ನಿಶಾಂತ್ ಬಿಲ್ಲಂಪದವು ವಿಟ್ಲ
ಮನೆ, ಕಚೇರಿ ಶ್ರೀಮಂತಿಕೆಯಿಂದ ಕಾಣಲು ಬೆಲೆಬಾಳುವ ಮರ, ಸ್ಟೀಲ್, ಪ್ಲಾಸ್ಟಿಕ್ ಬಳಸಿ ಒಳಾಂಗಣ ವಿನ್ಯಾಸ ಮಾಡುವುದು ಸಾಮಾನ್ಯ. ಆದರೆ ಉರುವಲಾಗಿ ಭಸ್ಮವಾಗುವ ಅಡಕೆ ಮರದಿಂದ ಅತ್ಯುತ್ತಮ ವಿನ್ಯಾಸ ಮಾಡಬಹುದು ಎನ್ನುವುದನ್ನು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ತೋರಿಸಿಕೊಟ್ಟಿದೆ.
ಭಾರತೀಯ ಸಂಸ್ಕೃತಿ, ಕಲೆ, ವಿದ್ಯೆಗಳನ್ನು ಪುನರ್ಜೀವನಗೊಳಿಸಲು ನಿರ್ಮಾಣವಾಗುತ್ತಿರುವ ವಿಶ್ವ ವಿದ್ಯಾಪೀಠದಲ್ಲಿ ಸಾಂಪ್ರದಾಯಿಕ ಶೈಲಿ ಅಳವಡಿಸಿಕೊಳ್ಳಲಾಗುತ್ತ್ತಿದೆ. ವಿದ್ಯಾಪೀಠದಲ್ಲಿನ ಬಾಲಕಿಯರ ವಸತಿ ನಿಲಯ ಹಾಗೂ ಧ್ಯಾನಮಂದಿರವಾಗಿರುವ ‘ಶ್ರದ್ಧಾಮಂದಿರ’ದಲ್ಲಿ ನಿರುಪಯುಕ್ತ ಅಡಕೆ ಮರಗಳಿಗೆ ಕಲಾವಿದರ ಮೂಲಕ ಜೀವಂತಿಕೆ ತುಂಬಿ ಮೌಲ್ಯವರ್ಧನೆ ಮಾಡಲಾಗಿದೆ. ಇದರ ಛಾವಣಿಗೆ ಹೊಸತನ ನೀಡಬೇಕೆಂದು ಉತ್ಸಾಹಿ ತಂಡ ಅಡಕೆ ಮರ ಬಳಸಿ ಆಧುನಿಕ ಶೈಲಿಯಲ್ಲಿ ಒಳಾಂಗಣ ವಿನ್ಯಾಸ ನಡೆಸಿದೆ. ಕಡಿಮೆ ಖರ್ಚಿನಲ್ಲಿ ನಿರ್ಮಾಣವಾದ ಈ ಛಾವಣಿ ದೇಸಿ ಘಮವನ್ನು ಜಗತ್ತಿಗೆ ಸಾರುತ್ತಿದೆ.
ಸಂಕಲ್ಪದಂತೆ ಕಾರ್ಯ: ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮೀಜಿ ಸಂಕಲ್ಪದಂತೆ ಎಲ್ಲರಿಗೂ ಮಾದರಿಯಾಗುವ ರೀತಿಯ ಕಾರ್ಯಗಳು ಅಶೋಕೆಯಲ್ಲಿ ನಡೆಯುತ್ತಿವೆ. ಇತಿಹಾಸದಲ್ಲಿ ಬಳಕೆ ಮಾಡುತ್ತಿದ್ದ ವ್ಯವಸ್ಥೆಗಳ ಮೂಲಕ ಆಧುನಿಕತೆಯನ್ನು ಕಡಿಮೆ ಖರ್ಚಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಆರೋಗ್ಯದ ದೃಷ್ಟಿಯಿಂದಲೂ ಈ ವ್ಯವಸ್ಥೆ ಉತ್ತಮವಾಗಿದೆ.
ಸಾಗರದ ಲಾಲ್ಬಹದ್ದೂರ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶ್ರೀನಂದನ್ ರಾವ್ ಕುಗ್ವೆ ನೇತೃತ್ವದಲ್ಲಿ ವಿನ್ಯಾಸ ಕಾರ್ಯ ನಡೆದಿದ್ದು, ಕೃಷಿಕರು, ಅಧ್ಯಾಪಕರು, ಅಡುಗೆ ಕೆಲಸ ಮಾಡುವವರು, ಕಲಾಕಾರರು, ಮರದ ಕೆತ್ತನೆ ಕೆಲಸ ಮಾಡುವವರು, ಪುರೋಹಿತರ ಸಹಿತ ಹಲವು ವರ್ಗದ ಜನರು ಭಾಗವಹಿಸಿದ್ದಾರೆ.
ಆಕರ್ಷಣೆಯ ಕೇಂದ್ರ: ಸುಮಾರು 800 ಅಡಕೆ ಮರಗಳನ್ನು ಆಯ್ಕೆ ಮಾಡಿ 115 ದಿನಗಳಲ್ಲಿ ವಿನ್ಯಾಸ ಕಾಮಗಾರಿ ಪೂರ್ಣಗೊಳಿಸಲಾಗಿದೆ. 25ರಿಂದ 30 ಮಂದಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, 800 ಮಾನವ ದಿನಗಳನ್ನು ಬಳಸಿಕೊಳ್ಳಲಾಗಿದೆ. 4800 ಚದರ ಅಡಿಯಷ್ಟು ವ್ಯಾಪ್ತಿಯಲ್ಲಿ ಅಡಕೆ ಮರದ ಸಲಾಕೆಯ ಮೂಲಕ ಅಲಂಕರಿಸಲಾಗಿದ್ದು, ನೋಡುಗರ ಆಕರ್ಷಣೆಯ ಕೇಂದ್ರವಾಗಿದೆ.
ಅಡಕೆ ಮರದ ಒಳಾಂಗಣ ವಿನ್ಯಾಸ ಕಾರ್ಯ ಉತ್ತಮ ರೀತಿ ಮೂಡಿ ಬಂದಿದೆ. ಈ ಕಾರ್ಯ ಉದ್ಯಮವಾಗಿ ಬೆಳೆಯಬೇಕು. ಇದು ಆತ್ಮನಿರ್ಭರ ಯೋಜನೆಗೆ ಪೂರಕ. - ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮೀಜಿ, ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠ ಸಿರವಂತೆ ಸೀಮೆಯ ಜನ ಸೇರಿಕೊಂಡು ಈ ಪ್ರಯತ್ನಕ್ಕೆ ಕೈ ಹಾಕಿದೆವು. ಸೇವಾಕರ್ತರು 150 ಕಿ.ಮೀ. ದೂರದಿಂದ ಬಂದು ಕಾರ್ಯ ನಿರ್ವಹಣೆ ಮಾಡುವ ಜತೆಗೆ ಮಳೆ ಸಮಸ್ಯೆಗಳನ್ನು ಎದುರಿಸಿ ಕಾರ್ಯನಿರ್ವಹಿಸಿದ್ದಾರೆ. - ಪ್ರೊ.ಶ್ರೀನಂದನ್ ರಾವ್ ಕುಗ್ವೆ, ವಾಣಿಜ್ಯ ಶಾಸ್ತ್ರ ಮುಖ್ಯಸ್ಥರು, ಲಾಲ್ ಬಹದ್ದೂರ್ ಕಾಲೇಜು, ಸಾಗರ ಅಡಕೆ ಮರದ ಛಾವಣಿ ನಿರ್ಮಾಣ ಅಡಕೆಯ ಮೌಲ್ಯವರ್ಧನೆಯ ಭಾಗವಾಗಿದೆ. ಪರಿಸರ ಪ್ರೇಮಿಯಾದ ವಸ್ತುಗಳ ಜತೆಗೆ ಸ್ಥಳೀಯವಾಗಿ ಸಿಗುವುದನ್ನೇ ಬಳಸಲಾಗಿದೆ. - ನವೀನ್ ಶರ್ಮ, ಸಂಸ್ಕೃತ ಪಂಡಿತ