

ಗೋಕರ್ಣ: ಗೋಕರ್ಣದ ಐವರು ಯುವಕರ ತಂಡ 5319 ಮೀ.(17450 ಅಡಿ) ಎತ್ತರದ ಹಿಮಾಚಲ ಪ್ರದೇಶದ ಅತ್ಯಂತ ಎತ್ತರದ ಪಾರ್ವತಿ ಮತ್ತು ಪೀನ್ ಕಣಿವೆ ಸಂಧಿ ಸ್ಥಳವನ್ನು ಏರುವ ಮೂಲಕ ಈ ಸಂಧಿ ಸ್ಥಳವನ್ನು ಮುಟ್ಟಿದ ವರ್ಷದ ಮೊದಲ ಪರ್ವತಾರೋಹಿ ತಂಡದ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಲ್ಲಿನ ರಾಜ್ಯ ಸರ್ಕಾರದ ಈ ವರ್ಷದ ದಾಖಲೆಯಲ್ಲಿ ಗೋಕರ್ಣದ ಐವರು ಪರ್ವತಾರೋಹಿಗಳ ಹೆಸರು ನೋಂದಾಯಿಸಲ್ಪಟ್ಟಿರುವುದು ವಿಶೇಷ.
ಹಿಮಾಚಲದ ಅತ್ಯಂತ ಎತ್ತರದ ಈ ಎರಡು ಕಣಿವೆಯ ಸಂಧಿ ಸ್ಥಳವನ್ನು ಏರಿ ರಾಷ್ಟ್ರ ಧ್ವಜ ಹಾರಿಸುವ ಕನಸು ಹೊಂದಿದ ಅನೇಕ ಯುವಕರಿದ್ದಾರೆ. ಆದರೆ ಮೈನಸ್ 10 ಡಿಗ್ರಿ ತಾಪಮಾನದಲ್ಲಿನ ಈ ದುರ್ಗಮ ಪರ್ವತವನ್ನು ಏರಿ ತಲುಪುವುದು ಸಾಹಸ ಎಂಬುದು ಸ್ವತಃ ನುರಿತ ಪರ್ವತಾರೋಹಿಗಳ ಅಭಿಪ್ರಾಯವಾಗಿದೆ. ಈ ಸಾಹಸವನ್ನು ಸಮರ್ಥವಾಗಿ ಮಾಡಿ ಮುಗಿಸಿದ ಈ ತಂಡ ಇದರಲ್ಲಿ ಹೊಸ ದಾಖಲೆ ಕೂಡ ಮಾಡಿದೆ.
ಹಿಮಾಚಲದ ಖಾಜಾ ವಲಯದ ಮುದ್ ಎಂಬ ಹಳ್ಳಿಯಿಂದ ಪ್ರಾರಂಭವಾಗುವ 120 ಕಿ.ಮೀ. ಕಾಲ್ನೆಡಿಗೆಯ ಚಾರಣ ಪಾರ್ವತಿ ಮತ್ತು ಪೀನ್ ಕಣಿವೆಗಳ ಕೂಡು ಜಾಗವನ್ನು ತಲುಪುವ ಸ್ಥಿತಿ ಪ್ರದೇಶದ ವರೆಗೆ ಪೂರ್ಣಗೊಳಿಸಲು ಕನಿಷ್ಠ 10 ರಾತ್ರಿ 11 ಹಗಲಿನ ಪಯಣ. ಆದರೆ ಇವರು ಜೂನ್ 9ರಿಂದ ಚಾರಣವನ್ನು ಆರಂಭಿಸಿ 8 ರಾತ್ರಿ ಮತ್ತು 9 ಹಗಲಿನಲ್ಲಿ ಮುಗಿಸಿದ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.
ಪಾರ್ವತಿ ವ್ಯಾಲಿಯ ಈ ಸಂಧಿ ಸ್ಥಳವನ್ನು ಏರಿ ರಾಷ್ಟ್ರ ಧ್ವಜ ಹಾರಿಸುವ ಕನಸು ಹೊತ್ತು ಅನೇಕ ತಂಡಗಳು ಹಿಮಾಚಲಕ್ಕೆ ಹೋಗುತ್ತವೆ. ಆದರೆ, ಪ್ರತಿ ವರ್ಷ ಜೂನ್‌ದಿಂದ ಸೆಪ್ಟೆಂಬರ್‌ವರೆಗೆ ಮಾತ್ರ ಅವಕಾಶವಿರುವ ಈ ಸ್ಥಳದಲ್ಲಿ 10ರಿಂದ 12 ತಂಡಗಳು ಮಾತ್ರ ಯಶಸ್ವಿಯಾಗಿ ಸಾಹಸವನ್ನು ಪೂರ್ಣಗೊಳಿಸುವ ಭಾಗ್ಯಶಾಲಿಗಳಾಗಿರುತ್ತಾರೆ ಎನ್ನುತ್ತಾರೆ ಈ ತಂಡದ ಮಾರ್ಗದರ್ಶನ ಮಾಡಿದ ಹಿಮಾಚಲ ಸರ್ಕಾರದ ಅಧಿಕೃತ ಗೈಡ್ ಟೀಟು ನಯ್ಯರ್. ಅದರಲ್ಲೂ ಈ ವರ್ಷ ಪ್ರಥಮವಾಗಿ ಗೋಕರ್ಣದ ಈ ಯುವ ಪರ್ವತಾರೋಹಿಗಳು ಪೀನ್ ಪಾಯಿಂಟ್ ಮುಟ್ಟಿ ಸುರಕ್ಷಿತವಾಗಿ ಜೂ. 20ರ ರಾತ್ರಿ ಗೋಕರ್ಣಕ್ಕೆ ಮರಳಿರುವುದು ಮಹತ್ವದ್ದಾಗಿದೆ.
ಗೋಕರ್ಣದ ಗಣೇಶ ದಾಮೋದರ ಅಡಿ, ಮಹೇಶ ಗಣೇಶ ಹಿರೇಗಂಗೆ, ನಾಗಕುಮಾರ ಗಣಪತಿ ಗೋಪಿ, ಶ್ರೀನಿಧಿ ಚಂದ್ರಶೇಖರ ಅಡಿ ಮತ್ತು ಜೊಯಿಡಾದ ಧ್ರುವ ಎನ್. ಛಾಪಖಂಡ ಪರ್ವತಾರೋಹಿ ಯುವಕರಾಗಿದ್ದಾರೆ. ಇವರ ಜತೆ ಹಿಮಾಚಲದ ಓರ್ವ ಗೈಡ್ ಮತ್ತು ಆರು ಸಹಾಯಕರು ಚಾರಣದಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಲಡಾಕ್, ಮಾನಸ ಸರೋವರ, ಹಿಮಾಲಯದ ವಿವಿಧ ಪ್ರದೇಶಗಳಿಗೆ ಚಾರಣ ನಡೆಸಿದ್ದಾರೆ.
ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಚಾರಣ ಕೈಗೊಳ್ಳುವ ನಮಗೆ ಕೆಲಬಾರಿಯ ಮೈನಸ್ 5 ತಾಪಮಾನದ ಹಿಮಾಚ್ಛಾದಿತ ಜಾಗದಲ್ಲಿ ನಡೆಯುವುದು ಒಂದು ಸವಾಲಾಗಿತ್ತು. ಹಿಮ ನಡಿಗೆಯ ಕನಿಷ್ಠ ಅಭ್ಯಾಸ, ಅನುಭವವೂ ಇಲ್ಲದ ಕರಾವಳಿಯ ನಮಗೆ ಇದೊಂದು ಭಯಪೂರಿತ, ರೋಚಕ ಅನುಭವ. ಚಾರಣದುದ್ದಕ್ಕೂ ನಮ್ಮ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಸ್ಥಿತಿಯ ಮಧ್ಯೆ ನಾವು ಅಂತಿಮ ಗುರಿ ತಲುಪಿದ್ದು ನಮ್ಮ ಕನಸನ್ನು ನನಸು ಮಾಡಿತ್ತು’-ನಾಗಕುಮಾರ ಗೋಪಿ, ಪರ್ವತಾರೋಹಿ.