ಅಶೋಕೆಯಲ್ಲಿ ಸ್ವಭಾಷಾ ಚಾತುರ್ವಸ್ಯ 10ರಿಂದ

7-gkn
Published on

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ 32ನೇ ಚಾತುರ್ವಸ್ಯ ವ್ರತದೀಕ್ಷಾ ಮಹಾಪರ್ವ ಶ್ರೀಮಠದ ಮೂಲಸ್ಥಾನ ಇಲ್ಲಿನ ಅಶೋಕೆಯಲ್ಲಿ ಆಷಾಢ ಪೌರ್ಣಿಮೆ ಜು. 10ರಿಂದ ಶುಭಾರಂಭಗೊಳ್ಳಲಿದೆ. ಶ್ರೀಮಜ್ಜಗದ್ಗುರು ಪೀಠಾಧಿಪತಿಗಳಾದ ಗುರುವರ್ಯರೋರ್ವರಿಂದ ಮಾತೃಭಾಷಾ ಸಂರಕ್ಷಣಾರ್ಥವಾಗಿ ಚಾತುರ್ವಸ್ಯವೊಂದು ಆಚರಿತವಾಗುತ್ತಿರುವುದು ನೂತನ ಶಕಾರಂಭಕ್ಕೆ ಕಾರಣವಾಗಲಿದೆ. ಭಾದ್ರಪದ ಪೌರ್ಣಿಮೆ ಸೆ. 7ರ ತನಕ ಆಯೋಜಿತವಾಗಿರುವ ಈ ವಿಶ್ವಾವಸು ಸಂವತ್ಸರದ ಚಾತುರ್ವಸ್ಯ ಕನ್ನಡ ಮಾತೃಭಾಷೆಯನ್ನು ಪರಿಶುದ್ಧವಾಗಿ ಮಾತನಾಡಲು ಪ್ರೇರೇಪಿಸಲಿರುವ ಕಾರಣ ಪ್ರಸ್ತುತ ಚಾತುರ್ವಸ್ಯ ‘ಸ್ವಭಾಷಾ ಚಾತುರ್ವಸ್ಯ’ದ ಅಭಿನಾಮದಲ್ಲಿ ಸಂಸ್ಕೃತಿ ಮತ್ತು ಪರಂಪರೆಯ ವಾಹಕವಾಗಿ, ಮರೆತುಹೋದ ಮನೆಮಾತನ್ನು ನೆನಪಿಸುವ ಮಹಾಪರ್ವ ಆಗಲಿದೆ. ಜು. 10 ರಂದು ಪ್ರಾತಃಕಾಲ ಶ್ರೀಗಳಿಂದ ಶ್ರೀವ್ಯಾಸ ಪೂಜೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀವ್ಯಾಸಪೀಠದಲ್ಲಿ ವ್ರತದೀಕ್ಷಾಬದ್ಧರಾದ ಶ್ರೀಗುರುವರ್ಯರು ಅನುಗ್ರಹ ಪೂರ್ವಕವಾದ ಧರ್ಮಸಭೆಯಲ್ಲಿ ಚಾತುರ್ವಸ್ಯ ದಿವ್ಯ ಸಂದೇಶ ಮತ್ತು ಆಶೀರ್ವಚನವನ್ನು ದಯಪಾಲಿಸುವರು. ಜು. 13ರಂದು ಶ್ರೀಗಳವರ ವರ್ಧಂತಿ ನಿಮಿತ್ತ ವಿಶೇಷ ಕಾರ್ಯಕ್ರಮ ಮತ್ತು ದಿವ್ಯಾಶೀರ್ವಾದ ಏರ್ಪಾಟಾಗಿದೆ. ಜು. 21ರಂದು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಚಾತುರ್ವಸ್ಯದ ಪ್ರಥಮ ಸ್ವಭಾಷಾ ಗೋಷ್ಠಿ ಆಯೋಜಿಸಲಾಗಿದ್ದು, ಇದರಲ್ಲಿ ನಾಡುನುಡಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸಿದ ಸಾಧಕ ವಿದ್ವಾಂಸರು ಭಾಗವಹಿಸುವರು. ಅಗಸ್ಟ್ 16ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿತವಾಗುವುದು. ಅ. 19ರಂದು ದ್ವಿತೀಯ ಸ್ವಭಾಷಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಅ. 27ರಂದು ಶ್ರೀಮಠದಲ್ಲಿ ಶ್ರೀ ಗಣೇಶ ಚತುರ್ಥಿ ನಿಮಿತ್ತ ಶ್ರೀಗಳಿಂದ ವಿಶೇಷ ಪೂಜೆ ನಡೆಯುವುದು. ಇವುಗಳ ಜೊತೆಗೆ ಅನುದಿನದ ವಿಶೇಷ ಕಾರ್ಯಕ್ರಮಗಳಾಗಿ ಶ್ರೀಪೂಜೆ, ಸರ್ವಸೇವೆ, ಸೇವಾಸಮರ್ಪಣೆ, ಸಂಘಟನಾತ್ಮಕ ಸಭೆ ಮತ್ತು ಉಪಾಸನಾ ವೈವಿಧ್ಯಗಳು ಚಾತುರ್ವಸ್ಯ ಪಾವಿತ್ರ್ಯ ಸುಯೋಗವನ್ನು ಶಿಷ್ಯಭಕ್ತರಿಗೆ ಕರುಣಿಸಲಿವೆ.ಹವ್ಯಕ ಮಹಾಮಂಡಲದ ಸಹಯೋಗದಲ್ಲಿ ಸುಸಂಘಟಿತವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ಸರ್ವಾಧಿಕಾರಿಗಳು, ಪ್ರಶಾಸನಾಧಿಕಾರಿಗಳು ಮತ್ತು ಸ್ವಭಾಷಾ ಚಾತುರ್ವಸ್ಯ ಸಮಿತಿಯ ಸಮಸ್ತ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net