

ಕುಮಟಾ: ತಾಲೂಕಿನ ಪುಣ್ಯಕ್ಷೇತ್ರ ಗೋಕರ್ಣ ರಸ್ತೆ ಸಂಪೂರ್ಣ ಹದಗಟ್ಟಿದೆ. ಕೂಡಲೇ ರಸ್ತೆಯನ್ನು ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಭಾಸ್ಕರ ಪಟಗಾರ ಆಗ್ರಹಿಸಿದ್ದಾರೆ.
ಗೋಕರ್ಣ ರಸ್ತೆಯನ್ನು ಕಳೆದ ವರ್ಷ ಮಳೆಗಾಲ ಮುಗಿದ ನಂತರ ದುರಸ್ತಿ ಮಾಡಲಾಗಿತ್ತು. ಆದರೆ, ಪ್ರತಿಬಾರಿ ಹೊಂಡವಾಗುವ ಜಾಗದಲ್ಲೇ ಈ ಬಾರಿಯೂ ಮಳೆಗಾಲಕ್ಕೆ ಮುನ್ನವೇ ಹೊಂಡಮಯವಾಗಿದೆ. ಇದರರ್ಥ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿಲ್ಲ ಎಂಬುದು ವೇದ್ಯವಾಗುತ್ತದೆ.
ರಸ್ತೆಯ ಹೊಂಡಗುಂಡಿಗಳಿಂದಾಗಿ ವಾಹನ ಸಂಚಾರ ಕಷ್ಟವಾಗಿದೆ. ಈ ಬಗ್ಗೆ ವಿಚಾರಿಸಿದರೆ ಜೋರಾದ ಮಳೆಯಿಂದ ರಸ್ತೆ ಹಾಳಾಗಿದೆ ಎಂದು ಪಿಡಬ್ಲ್ಯುಡಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಮಗಾರಿಯ ಗುಣಮಟ್ಟದ ಕೊರತೆಯೇ ಇದಕ್ಕೆ ಕಾರಣ. ಆದ್ದರಿಂದ ಈ ವಿಷಯವನ್ನು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಗಮನಕ್ಕೆ ತರಲಾಗಿದೆ. ಸ್ವಲ್ಪ ದಿನದಲ್ಲಿ ಅವ್ಯವಸ್ಥೆಯನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ ಎಂದು ಭಾಸ್ಕರ ಪಟಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.