

ಗೋಕರ್ಣ: ನಮ್ಮ ಜೀವನ ಮತ್ತು ಕಾಲ ಯಾವತ್ತೂ ಬೇರೆಬೇರೆಯಲ್ಲ. ಕಾಲ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಯಾರ ಬದುಕೂ ಇದನ್ನು ಹೊರತಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಬಾಳ್ವೆಯನ್ನು ಸರಿಯಾಗಿ ತಿಳಿದುಕೊಂಡರೆ ಅದೇ ನಿಜವಾದ ಕಾಲಜ್ಞಾನ ಎಂದು ಇಲ್ಲಿನ ಅಶೋಕೆಯ ಗುರುದೃಷ್ಟಿ ಭವನದಲ್ಲಿ 31ನೇ ಅನಾವರಣ ಚಾತುರ್ವಸ್ಯ ದೀಕ್ಷಾಧಾರಿಗಳಾದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಂಗಳವಾರದ ಪ್ರವಚನದಲ್ಲಿ ಆಶೀರ್ವಚನ ನೀಡಿದರು.
ಗುರುಕುಲ ಮತ್ತು ಮಠಗಳು ಜೀವನ ಶಿಕ್ಷಣವನ್ನು ಅನುಗ್ರಹಿಸುವ ವಿದ್ಯಾಸ್ಥಾನಗಳು. ಇಂತಹ ವಿದ್ಯಾಸ್ಥಾನಗಳು ಜೀವನವನ್ನು ಅರ್ಥೈಸುವ ಪರಮ ತಾಣಗಳು. ಇಲ್ಲಿ ಜೀವನದ ಬಗ್ಗೆ ಪಡೆಯುವ ಸರಿಯಾದ ಶಿಕ್ಷಣ ಕಾಲಜ್ಞಾನಕ್ಕೆ ಕಾರಣವಾಗುತ್ತದೆ. ಇನ್ನು ನಮ್ಮ ಜೀವನ ಹೇಗೆ? ಏನು? ಎನ್ನುವುದನ್ನು ಖಗೋಳ ಮಂಡಲದಲ್ಲಿ ಪ್ರತಿಜೀವಿಯನ್ನು ಪ್ರತಿನಿಧಿಸುವ ಗ್ರಹ, ರಾಶಿಗಳ ಅಧ್ಯಯನದಿಂದ ನಮ್ಮದಾಗಿಸಿಕೊಳ್ಳಬಹುದು ಎಂದರು.
ರಾಶಿಚಕ್ರಗಳು ಬದುಕಿನ ಸೂಕ್ಷ್ಮ ಮತ್ತು ಸ್ಥೂಲಗಳನ್ನು ಒಳಗೊಂಡಂತೆ ಪ್ರತಿಯೊಂದರ ಅರಿವನ್ನೂ ನೀಡುತ್ತವೆ. ಮಳೆ, ನೀರಿನ ಹರಿವು, ವಾಯು ಮತ್ತು ಅಗ್ನಿ ಪ್ರಕೋಪಗಳಿಗೆ ಗ್ರಹಗಳು ಕಾರಣವಾದರೆ, ರಾಶಿಗಳು ಮನುಷ್ಯರ ಗುಣ-ಲಕ್ಷಣ, ಶೀಲ-ಸ್ವಭಾವಗಳನ್ನು ನಿಗದಿಸುತ್ತವೆ. ವ್ಯಕ್ತಿ ಹೊಂದಿರುವ ಪ್ರತಿಯೊಂದು ಗುಣಲಕ್ಷಣಗಳಿಂದ ಆತನ ರಾಶಿಯ ಋಜುವಾತಾಗುತ್ತದೆ. ಇದೇ ಬಗೆಯಲ್ಲಿ ನಮ್ಮ ಅಂಗಾಂಗ, ಇಂದ್ರಿಯಗಳು ಮತ್ತು ಒಟ್ಟಾರೆ ಶರೀರ ರಚನೆಯ ಮೂಲಕವೂ ನಾವು ಯಾವ ರಾಶಿಗೆ ಸೇರಿದವರು ಎನ್ನುವುದನ್ನು ಅರ್ಥೈಸಬಹುದಾಗಿದೆ. ರಾಶಿಗಳು ನಮ್ಮ ವ್ಯವಹಾರ-ವ್ಯಾಪಾರ, ಚಾತುರ್ಯ, ಆರೋಗ್ಯ ಭಾಗ್ಯ, ಉಪಕಾರಶೀಲತೆ, ಶುಚಿತ್ವ, ಪ್ರಾಜ್ಞತೆ ಮುಂತಾದ ಎಲ್ಲ ವ್ಯಕ್ತಿ ವಿಷಯಗಳನ್ನು ವಿಶ್ಲೇಷಿಸುತ್ತವೆ. ಕಾರಣ ನಮ್ಮ ಗ್ರಹರಾಶಿ ಮಂಡಲಗಳನ್ನು ದರ್ಪಣವಾಗಿಸಿಕೊಂಡು ಬದುಕಿನ ಓರೆಕೋರೆಗಳನ್ನು ಮರೆಯಾಗಿಸಿ ಹಸನಾದ ಜೀವನವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ. ಹೀಗೆ ಗ್ರಹರಾಶಿಗಳ ದಾರಿಯಿಂದ ಯುಕ್ತವಾದ ಕಾಲಜ್ಞಾನ ಹೊಂದಿ ಪರಿಪೂರ್ಣ ಜೀವನ ನಿರ್ವಹಣೆ ಸರ್ವರದಾಗಲಿ ಎಂದು ಶ್ರೀಗಳು ಆಶೀರ್ವಚನವಿತ್ತರು.
ಗುಂಡಿ ಮಂಜಪ್ಪ ದಂಪತಿಯಿಂದ ಭಿಕ್ಷಾಸೇವೆ ಸಮರ್ಪಿತವಾಯಿತು. ಚಾತುರ್ವಸ್ಯ ಸೇವಾ ಸಮಿತಿಯಿಂದ ಶ್ರೀಗಳಿಗೆ ಫಲ ಸಮರ್ಪಣೆ ನಡೆಯಿತು. ಸಮಿತಿ ಕೋಶಾಧ್ಯಕ್ಷ ಸುಧಾಕರ ಬಡಗಣಿ, ಶ್ರೀಗಳ ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ ಮುಡಾರೆ, ಹವ್ಯಕ ಮಹಾಮಂಡಲ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಕಾರ್ಯಾಲಯ ಪ್ರಮುಖ ಜಿ.ವಿ. ಹೆಗಡೆ, ಮೋಹನ ಭಟ್ಟ ಹರಿಹರ ಮುಂತಾದವರಿದ್ದರು. ಎಸ್.ಜಿ. ಭಟ್ಟ ಕಬ್ಬಿನಗದ್ದೆ ಕಾರ್ಯಕ್ರಮ ನಿರ್ವಹಿಸಿದರು.