ಸೇವಾ ಪ್ರವೃತ್ತಿ ಬೆಳೆಸುವುದೆ ನಿಜವಾದ ಸಾಕ್ಷರತೆ

1-GKN- RAGAHAV
Published on

ಗೋಕರ್ಣ: ಸ್ವಾರ್ಥದ ಬದುಕನ್ನು ರೂಢಿಸಿಕೊಳ್ಳದೇ ಸಮಷ್ಟಿಗಾಗಿ, ಸಮಾಜಕ್ಕಾಗಿ ಬದುಕುವ ಪ್ರವೃತ್ತಿಯನ್ನು ಸಾಧಿಸಬೇಕು. ಇದಕ್ಕೆ ಸೇವಾ ಮನೋಭಾವ ಅನ್ವಯಿಸಿಕೊಳ್ಳುವುದು ಉತ್ತಮ ಮಾರ್ಗ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ರಾಜಾ ಮಲ್ಲೇಶ್ವರ, ಮಹಾಲಕ್ಷ್ಮೀ ಮತ್ತು ಸರ್ವಜ್ಞ ವಲಯಗಳ ಶಿಷ್ಯಭಕ್ತರಿಂದ ಶುಕ್ರವಾರ ಆಯೋಜಿಸಿದ್ದ ಭಿಕ್ಷಾಸೇವೆಯಲ್ಲಿ ಶ್ರೀಗಳು ಆಶೀರ್ವಚನ ಅನುಗ್ರಹಿಸಿದರು.
ಸೇವಾ ಸಾಕ್ಷರತೆ ಶ್ರೀಮಠದ ಎಲ್ಲ ಕಾರ್ಯಕರ್ತರಲ್ಲಿ ಬರಬೇಕು. ಸಮಾಜದಲ್ಲಿ ಸೇವಾ ಪ್ರವೃತ್ತಿಯನ್ನು ಬೆಳೆಸುವುದೇ ನಿಜವಾದ ಸಾಕ್ಷರತೆ. ಸೇವಾ ಸಾಕ್ಷರರಾಗುವ ಮೂಲಕ ದಿವ್ಯ ಭಾರತದ ಭವ್ಯ ಭವನದ ಇಟ್ಟಂಗಿಗಳಾಗೋಣ. ಸಂಕಷ್ಟದಲ್ಲಿರುವವರ, ಆರ್ತರ ಕಣ್ಣೀರು ಒರೆಸಿ ಅವರ ಹೃದಯ ಭಾರವನ್ನು ಇಳಿಸುವ ಸಾರ್ಥಕ ಕೆಲಸವನ್ನು ಕಾರ್ಯಕರ್ತರು ಕೈಗೊಳ್ಳಬೇಕು ಎಂದರು.
ಸೇವೆಯಲ್ಲಿನ ಸಂತೃಪ್ತಿ ಸಮಗ್ರ ಬದುಕಿಗೇ ಸಮಾಧಾನ ತುಂಬುವಂಥದ್ದಾಗಿದೆ. ನಮ್ಮ ದೇಶದ ಪೂರ್ವ ಸಂಸ್ಕೃತಿ, ಸದಾಚಾರ ಮತ್ತು ಸತ್ಸಂಪ್ರದಾಯಗಳನ್ನು ಸಂರಕ್ಷಿಸಲು ನಾವೆಲ್ಲ ಸೇವೆಯಿಂದ ತ್ಯಾಗಮಯ ಪ್ರವೃತ್ತಿಯವರಾಗಬೇಕು. ಚಾತುರ್ಮಾಸ್ಯ ಎನ್ನುವುದು ಸರ್ವ ಶಿಷ್ಯಭಕ್ತರಲ್ಲಿ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣದ ಶಕ್ತಿ ತುಂಬುವ ಸುಸಂದರ್ಭ. ಕಾರಣ ಸೇವೆ, ಸಾಧನೆ ಮತ್ತು ಸರ್ವರ ಸಂಕಟ ನಿವೃತ್ತಿ ಎಂಬ ತ್ರಿ-ನೇತ್ರರಾಗಿ ಕಾರ್ಯನಿರ್ವಹಿಸಿ ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಗಳು ಸಮಾಜಕ್ಕೆ ಅನುಪಮ ಸೇವೆಯನ್ನಿತ್ತ 16 ಸಾಧಕರನ್ನು ಸನ್ಮಾನಿಸಿದರು. ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಬೆಂಗಳೂರು ಪ್ರಾಂತ ಉಪಾಧ್ಯಕ್ಷ ಜಿ.ಜಿ. ಹೆಗಡೆ ತಲಕೇರಿ, ಮಂಡಲ ಕಾರ್ಯದರ್ಶಿ ರಾಮಮೂರ್ತಿ, ಮಾತೃಪ್ರಧಾನರಾದ ವೀಣಾ ಜಿ.ಪುಳು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ಟ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಉಪಸ್ಥಿತರಿದ್ದರು. ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಕಾರ್ಯಕ್ರಮ ನಿರ್ವಹಿಸಿದರು.
ಕುಮಟಾ ಮಂಡಲದ ಸೇವೆ: ಗುರುವಾರ ನಡೆದ ಕುಮಟಾ ಮಂಡಲದ ಉಪ್ಪಿನಪಟ್ಟಣ, ಮಿರ್ಜಾನ- ಅಚವೆ, ಕಾರವಾರ, ಅಂಕೋಲಾ ಮತ್ತು ಧಾರೇಶ್ವರ ವಲಯಗಳ ಶಿಷ್ಯಭಕ್ತರಿಂದ ನಡೆದ ಭಿಕ್ಷಾಸೇವೆಯಲ್ಲಿ ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡುತ್ತ ಶಿಕ್ಷಣ ಭವಿಷ್ಯದ ಮಾರ್ಗ ತೋರಿಸುವ ಸಾಧನವಾಗಬೇಕು. ಆದರೆ, ಆಧುನಿಕ ಎಂದು ಕರೆಯಲಾಗುತ್ತಿರುವ ಇಂದಿನ ಶೈಕ್ಷಣಿಕ ಪದ್ಧತಿ ಯುವಸಮೂಹ ದಾರಿ ತಪ್ಪಲು ಕಾರಣವಾಗುತ್ತಿದೆ. ಯುವ ಜನತೆಯಲ್ಲಿ ಸಂಸ್ಕೃತಿ-ಸಂಸ್ಕಾರಗಳ ಸಾರ ಸರ್ವಸ್ವವನ್ನು ತುಂಬುವಂತಹ ಶಿಕ್ಷಣ ವ್ಯವಸ್ಥೆಯನ್ನು ಉತ್ತೇಜಿಸುವ ಕಾರ್ಯವಾಗಬೇಕು. ಇದೇ ಹಿನ್ನೆಲೆಯಿಂದ ಶ್ರೀಮಠ ಸನಾತನ ಗುರುಕುಲ ಶಿಕ್ಷಣ ಕ್ರಮಕ್ಕೆ ಆದ್ಯತೆಯಿತ್ತು ನಮ್ಮ ಸಮಾಜಸ್ಥರು ಇರುವ ಎಲ್ಲೆಡೆಗಳಲ್ಲಿ ವಿಶ್ವವಿದ್ಯಾಪೀಠದ ಶಾಖೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ 15 ಸಾಧಕರನ್ನು ಮತ್ತು 13 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net