

ಗೋಕರ್ಣ: ಶ್ರೀರಾಮಚಂದ್ರಾಪುರ ಮಠ ಪರಂಪರೆಯಲ್ಲಿಯೇ ಅತಿ ವಿಶಿಷ್ಟವಾದ ನದಿ ತೀರ-ಪುಣ್ಯಕ್ಷೇತ್ರಗಳ ತಪೋಯೋಗ್ಯ ಭೂಮಿ ನಮ್ಮ ತೀರ್ಥಹಳ್ಳಿ ಮಠ. ಇದರ ಜೀಣೋದ್ಧಾರದ ಶುಭಾರಂಭ ಅನಾವರಣಗೊಂಡಿದೆ. ಎಲ್ಲರೂ ಸಮರ್ಪಣಾ ಭಾವದಿಂದ ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಶ್ರೀಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಗುರುದೃಷ್ಟಿ ಭವನದಲ್ಲಿ 31ನೇ ಚಾತುರ್ವಸ್ಯ ಕಾರ್ಯಕ್ರಮದಲ್ಲಿ ಶನಿವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ದೊಡ್ಡಗುರುವರ್ಯರು ತಮ್ಮ ಜೀವಿತದ ಬಹು ಸಮಯವನ್ನು ಸಮರ್ಪಿಸಿದ ತೀರ್ಥಹಳ್ಳಿ ಮಠ ಹಳೇಚರಿತ್ರೆ ಮತ್ತು ಹೊಸ ಇತಿಹಾಸ ಎರಡನ್ನೂ ಪಡೆದ ಬ್ರಹ್ಮಲೋಕ. ಒಂದೊಂದು ತಲೆಮಾರು ಒಂದೊಂದು ಕಡೆ ಸಾಗುತ್ತದೆ ಎಂಬುದಕ್ಕೆ ತೀರ್ಥಹಳ್ಳಿ ಮಠ ನಿದರ್ಶನ. ಶ್ರೀರಾಮಚಂದ್ರಾಪುರದ ಮೂಲಮಠ, ಪ್ರಧಾನ ಮಠ, ಪ್ರಾಚೀನವಾದ ಕೆಕ್ಕಾರು ಮಠ, ಪರಂಪರೆಯಲ್ಲಿ ವಿಲೀನವಾದ ಭಾನ್ಕುಳಿ ಮಠ ಮತ್ತು ತಾವೇ ಸಂಸ್ಥಾಪಿಸಿದ್ದ ಮಾಣಿ ಮಠ ತಾಣಗಳ ಹೊರತಾಗಿ ಹಿರಿಯ ಶ್ರೀಗಳು ಆಯ್ಕೆ ಮಾಡಿಕೊಂಡಿದ್ದ ತೀರ್ಥಹಳ್ಳಿ ಮಠ ಹೊಸರೂಪ ಪಡೆದು ವಿಶ್ವದ ಮುಂದೆ ಅನಾವರಣಗೊಳ್ಳುವಂತಾಗಬೇಕು ಎಂದರು.
ಶ್ರೀಮಠಕ್ಕೆ ದೊಡ್ಡಸೇವೆ ಸಲ್ಲಿಸಿ, ಶ್ರೀಮಠದ ಶ್ಯಾನುಭಾಗರಾಗಿ ಕರ್ತವ್ಯಪಾಲನೆಯಲ್ಲಿದ್ದ ಬಾಬು ನಾರಾಯಣ ಭಟ್ಟ ಅವರು ತೀರ್ಥಹಳ್ಳಿ ಮಠದ ಪುನರ್ ನವೀಕರಣ ಪರ್ವದ ಅನಾವರಣ ಕೈಗೊಂಡರು. ರಾಮಚಂದ್ರಾಪುರ ಮಂಡಲದ ತೀರ್ಥರಾಜಪುರ, ಭೀಮನಕೋಣೆ ಮತ್ತಿತರ ವಲಯಗಳ ಶಿಷ್ಯಭಕ್ತರಿಂದ ಭಿಕ್ಷಾಸೇವೆ ನೆರವೇರಿತು.
ಚಾತುರ್ವಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಭಟ್ಟ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ನಾಗರಾಜ ಭಟ್ಟ ಪೆದಮಲೆ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹರಿಪ್ರಸಾದ ಪೆರಿಯಾಪ್ಪು ಇತರರಿದ್ದರು. ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.