

ಗೋಕರ್ಣ: ವಿಶ್ವ ಪ್ರಸಿದ್ಧ ಪ್ರವಾಸಿ ಕೇಂದ್ರ ಗೋಕರ್ಣದಲ್ಲಿನ ಆಕರ್ಷಣೀಯ ನೈಸರ್ಗಿಕ ಸ್ಥಳಗಳಿಗೆ ಆಕರ್ಷಿತರಾಗಿ ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಜಾಲತಾಣದಲ್ಲಿ ಅವುಗಳ ಸೌಂದರ್ಯದ ಕುರಿತು ಹಾಡಿ-ಹೊಗಳುವುದನ್ನು ಓದಿದ್ದೇವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕಳೆದ ಎರಡು ವರ್ಷಗಳಿಂದ ಹೆಚ್ಚು ಮೂದಲಿಕೆ ಮತ್ತು ತೀವ್ರ ತೆಗಳಿಕೆಗೆ ತುತ್ತಾದ ಸ್ಥಳವೊಂದಿದೆ. ಅದೇ ಇಲ್ಲಿನ ಜನಾಕರ್ಷಿತ ಕುಡ್ಲೆ-ಓಂಬೀಚ್ ರಸ್ತೆ.
ಪ್ರಮುಖ ಕೊಂಡಿ: ಓಂ ಬೀಚ್‌ನಿಂದ ಕುಡ್ಲೆ ತೀರ ಮತ್ತು ಓಂ ಬೀಚ್‌ಗೆ ಹೋಗಲು ಕಳೆದ ಐದು ವರ್ಷಗಳ ಹಿಂದೆ ಕೋಟ್ಯಂತರ ರೂ. ವೆಚ್ಚದಲ್ಲಿ ಓಂ ಬೀಚ್ ಮುಖ್ಯ ರಸ್ತೆಯಿಂದ ಹೊಸದಾಗಿ ಈ ರಸ್ತೆ ನಿರ್ಮಿಸಲಾಯಿತು. ಹೊಸ ರಸ್ತೆ ನಿರ್ಮಾಣದಿಂದ ಈ ಎರಡೂ ಬೀಚ್‌ಗಳಿಗೆ ಮತ್ತು ಬೀಚ್‌ಗಳಿಂದ ಮುಖ್ಯ ಮಂದಿರಗಳಿಗೆ ಹೋಗಲು ಬಹಳ ಅನುಕೂಲವಾಗಿತ್ತು. ಆದರೆ, ಕಳೆದ ಮೂರು ವರ್ಷದಿಂದೀಚೆಗೆ ಡಾಂಬರಿನ ಅಂದಾಜು ಐದು ಕಿ.ಮೀ. ಉದ್ದದ ಈ ರಸ್ತೆ ಸಂಪೂರ್ಣ ಹದಗೆಟ್ಟು ಜಲ್ಲಿ ಮತ್ತು ಕಲ್ಲುಹುಡಿಯ ರಸ್ತೆಯಂತಾಗಿದೆ.
ದುರವಸ್ಥೆಗೊಳಗಾದ ಈ ರಸ್ತೆಯ ಐದು ಕಿ.ಮೀ. ಕ್ರಮಿಸಲು ಕನಿಷ್ಠ ಮುಕ್ಕಾಲು ತಾಸು ಹೋರಾಡುವ ದುಸ್ಥಿತಿ ಎದುರಾಯಿತು. ರಸ್ತೆಯಲ್ಲಿ ಕಾರು ಮುಂತಾದ ನಾಲ್ಕು ಚಕ್ರದ ವಾಹನ ಸಂಚರಿಸುವುದೇ ದುಸ್ಸಾಧ್ಯ. ಇಲ್ಲಿಗೆ ಬರುವ ಶೇ. 100ರಷ್ಟು ಯುವ ಪ್ರವಾಸಿಗರು ಬಾಡಿಗೆ ಪಡೆದ ದ್ವಿಚಕ್ರ ವಾಹನವನ್ನು ಬಳಸುವುದೇ ಹೆಚ್ಚು. ಅಂಥವರು ಈ ರಸ್ತೆಯಲ್ಲಿ ಹೋಗಿ ಮೇಲಿಂದ ಮೇಲೆ ಒಂದಿಲ್ಲೊಂದು ಬಗೆಯ ಅವಘಡಕ್ಕೆ ಈಡಾಗಿ ರಸ್ತೆಯ ಬಗ್ಗೆ ಸಾರ್ವಜನಿಕ ಮಾಧ್ಯಮದಲ್ಲಿ ದೂರಿಕೊಳ್ಳುವುದು ಸಾಮಾನ್ಯವಾಗಿದೆ.
ಹೀಗಿರಲು ಇಲ್ಲಿದೆ ಕಾರಣ?: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಶಾಸಕ ದಿನಕರ ಶೆಟ್ಟಿ ಅವರು ಪ್ರಯತ್ನಿಸಿ ಅದಕ್ಕೆ ಮಂಜೂರಾತಿಯನ್ನೂ ತಂದರು. ಕಳೆದ ಜನವರಿ ವೇಳೆಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರನ್ನು ಕೂಡ ನಿಗದಿ ಪಡಿಸಲಾಯಿತು. ರಸ್ತೆ ಕಾಮಗಾರಿ ಗುತ್ತಿಗೆ ಹಿಡಿದವರು ಫೆಬ್ರವರಿ ವೇಳೆಗೆ ಕಾಮಗಾರಿ ಪ್ರಾರಂಭಿಸುವ ತಯಾರಿಯಲ್ಲಿದ್ದರು. ಈ ಸಮಯದಲ್ಲಿ ಇಲ್ಲಿನ ಕೆಲವು ರೆಸಾರ್ಟ್, ರೆಸ್ಟೋರೆಂಟ್ ಮುಂತಾದ ವ್ಯವಹಾರದವರು ಶಿವರಾತ್ರಿಯ ಫೆಬ್ರವರಿಯಲ್ಲಿ ಕಾಮಗಾರಿ ಪ್ರಾರಂಭಿಸಿ ಮೇ ತನಕ ಅದು ಮುಂದುವರಿದರೆ ಅದರಿಂದ ತಮ್ಮ ವರ್ಷದ ಪ್ರಮುಖ ವ್ಯವಹಾರದ ಸೀಸನ್‌ಗೆ ಹಾನಿಯಾಗುವ ಆತಂಕ ವ್ಯಕ್ತಪಡಿಸಿ ಕಾಮಗಾರಿಯನ್ನು ಮುಂದಕ್ಕೆ ಹಾಕಲು ವಿನಂತಿಸಿದರು.
ಅತಂತ್ರದಲ್ಲಿ ಕಾಮಗಾರಿ?: ಆ ನಂತರದಲ್ಲಿ ನಡೆದ ಚುನಾವಣೆ ಮತ್ತು ಬದಲಾದ ಸರ್ಕಾರದಿಂದಾಗಿ ಈಗ ಕಾಮಗಾರಿ ಅತಂತ್ರ ಸ್ಥಿತಿಯಲ್ಲಿರುವಂತಾಗಿದೆ. ಹೊಸ ಸರ್ಕಾರ, ಮಂಜೂರಾದ ಹಳೆಯ ಕಾಮಗಾರಿಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಿದೆ. ಹೀಗಾಗಿ, ರಸ್ತೆಯ ಹಣೆಬರಹ ಇನ್ನೂ ಅಸ್ಪಷ್ಟವಾಗಿದೆ. ಈ ನಡುವೆ ಪುನರಾಯ್ಕೆಗೊಂಡ ಶಾಸಕ ದಿನಕರ ಶೆಟ್ಟಿ ಈ ರಸ್ತೆಯ ಪ್ರಾಮುಖ್ಯದ ಬಗ್ಗೆ ನೂತನ ಸಚಿವರಿಗೆ ಮನದಟ್ಟು ಮಾಡಿದ್ದು, ಕಾಮಗಾರಿ ಆದಷ್ಟು ಬೇಗ ಪ್ರಾರಂಭವಾಗುವ ಆಶಾಭಾವದಲ್ಲಿದ್ದಾರೆ.
ಓಂ ಬೀಚ್ ಮತ್ತು ಕುಡ್ಲೆಗೆ ಹೋಗುವ ಹೆಚ್ಚಿನ ಯುವ ಪ್ರವಾಸಿಗರು ದ್ವಿಚಕ್ರ ವಾಹನಗಳ ಮೂಲಕ ಅತ್ಯಂತ ಅಪಾಯಕಾರಿ ರಸ್ತೆಯನ್ನು ಅನಿವಾರ್ಯವಾಗಿ ಬಳಸುತ್ತಿದ್ದಾರೆ. ರಸ್ತೆ ಸರಿ ಇದ್ದರೆ ಮಾತ್ರ ಗೋಗರ್ಭ ಪ್ರದೇಶದಲ್ಲಿರುವ ರೆಸಾರ್ಟ್, ವಸತಿ ಗೃಹ, ಹೋಟೆಲ್‌ಗಳಿಗೆ ಉತ್ತಮ ವ್ಯವಹಾರ ನಡೆಸಲು ಸಾಧ್ಯ. ಕಾರಣ ಕಾಮಗಾರಿ ಪ್ರಾರಂಭಕ್ಕೆ ಈಗಾಗಲೇ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ.ದಿನಕರ ಶೆಟ್ಟಿ ಶಾಸಕ