ಗೋಕರ್ಣ ಮಹಾಬಲೇಶ್ವರ ಜಾತ್ರೆ ಇಂದಿನಿಂದ

16gkn1-a-
Published on

ಗೋಕರ್ಣ: ಮಹಾಬಲೇಶ್ವರ ಮಂದಿರ ವತಿಯಿಂದ ವಾರ್ಷಿಕ ಒಂಬತ್ತು ದಿನಗಳ ಆಗಮಿಕ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಾಘ ಕೃಷ್ಣ ನವಮಿ 17ರಿಂದ ಪ್ರಾರಂಭವಾಗಲಿದೆ. ಮಾಘ ಕೃಷ್ಣ ಚತುರ್ದಶಿ 21ರಂದು ಮಹಾಶಿವರಾತ್ರಿ ಶಿವಯೋಗದ ಮಹಾಪರ್ವ ದಿನದಂದು ಸಂಜೆ ಮಹಾಬಲೇಶ್ವರ ಪುರ ಪರ್ಯಟನ, ರಾತ್ರಿ ಕೋಟಿ ತೀರ್ಥದಲ್ಲಿ ಜಲಯಾನೋತ್ಸವ ಮತ್ತು ಬೆಳಗಿನ ಜಾವ ರಥಬೀದಿಯಲ್ಲಿ ಪುಷ್ಪ ರಥೋತ್ಸವ ಏರ್ಪಾಟಾಗಿದೆ.

ಮಾಘ ಅಮಾವಾಸ್ಯೆ 24ರಂದು ಕ್ಷೇತ್ರ ಪದ್ಧತಿಯಂತೆ ಭಕ್ತರಿಂದ ಸಮುದ್ರ ತೀರದಲ್ಲಿ ಬಡವರಿಗೆ ಪಡಿ ವಿತರಣೆ ನಡೆಯಲಿದೆ. ಮಧ್ಯಾಹ್ನ ರಥಬೀದಿಯಲ್ಲಿ ಮಹಾಬಲೇಶ್ವರ ಮಹಾರಥೋತ್ಸವ ಜರುಗಲಿದ್ದು ಅಪಾರ ಭಕ್ತರು ಪಾಲ್ಗೊಳ್ಳುವರು. 25ರಂದು ಕೋಟಿ ತೀರ್ಥದಲ್ಲಿ ನಡೆಯುವ ಅವಭೃತ ಮತ್ತು ಆತ್ಮಲಿಂಗ ಸನ್ನಿಧಿಯಲ್ಲಿ ಅಂಕುರಾರ್ಪಣ ಹಾಗೂ ಅಂಕುರ ಪ್ರಸಾದ ವಿತರಣೆಯೊಂದಿಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಕಲಾರಾಮ ಕಾರ್ಯಕ್ರಮ: ಮಹಾಶಿವರಾತ್ರಿ ನಿಮಿತ್ತ 17ರಿಂದ 24ರವರೆಗೆ ನಿತ್ಯ ಸಂಜೆ 6.30ಕ್ಕೆ ಸಮುದ್ರ ತೀರದಲ್ಲಿ ನಿರ್ವಿುಸಿದ ಮಹರ್ಷಿ ದೈವರಾತ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲಾಗಿದೆ. 17ರಂದು ಸಂಜೆ ಕಾರ್ಯಕ್ರಮವನ್ನು ಖ್ಯಾತ ಹಿಂದುಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಉದ್ಘಾಟಿಸುವರು. ನಂತರ ಹಿಂದುಸ್ತಾನಿ ಗಾಯನ ಕಾರ್ಯಕ್ರಮ.

ಧರ್ಮಸಭೆ: ಮಹಾಶಿವರಾತ್ರಿ ಪ್ರಯುಕ್ತ 22ರಂದು ಮಧ್ಯಾಹ್ನ 3 ರಿಂದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ. ಧರ್ಮಸಭೆಯಲ್ಲಿ ಶ್ರೀಗಳು ಮಂದಿರದಿಂದ ವಾರ್ಷಿಕವಾಗಿ ನೀಡಲಾಗುವ ಸಾರ್ವಭೌಮ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ, ವಿದ್ಯಾವಾರಿಧಿ ರಾಮಚಂದ್ರ ಭಟ್ಟ ಕೋಟೆಮನೆ ಅವರಿಗೆ ಪ್ರದಾನ ಮಾಡುವರು ಎಂದು ಶ್ರೀರಾಮಚಂದ್ರಾಪುರ ಮಠದ ಸಮ್ಮುಖ ಸರ್ವಾಧಿಕಾರಿ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net