

ಗೋಕರ್ಣ: ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದ 2015-16ನೇ ಸಾಲಿನ ಆದಾಯ ತೆರಿಗೆ ಬಾಕಿ ಪಾವತಿಸುವಂತೆ ಆಗಿನ ಆಡಳಿತ ನಿರ್ವಹಣೆಯಲ್ಲಿದ್ದ ಶ್ರೀರಾಮಚಂದ್ರಾಪುರ ಮಠಕ್ಕೆ ತೆರಿಗೆ ಇಲಾಖೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಈ ಕುರಿತು ಮಂಗಳೂರಿನ ಆದಾಯ ತೆರಿಗೆ ಅಧಿಕಾರಿ ಸತ್ಯನಾಥನ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ತೆರಿಗೆ ಮೌಲ್ಯಮಾಪನ ವರ್ಷ 2015-16ಕ್ಕೆ ಸಂಬಂಧಿಸಿದ 1.42 ಕೋಟಿ ರೂ. ತೆರಿಗೆ ಬಾಕಿ ಪಾವತಿಸುವಂತೆ ಆದಾಯ ಕರ ಇಲಾಖೆ ಶ್ರೀರಾಮಚಂದ್ರಾಪುರ ಮಠಕ್ಕೆ 2023ರ ಮಾರ್ಚ್ 6 ರಂದು ಆದೇಶಿಸಿತ್ತು. ಈ ನಡುವೆ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪಿನ ಪ್ರಕಾರ ಮಠವು 2021 ಮೇ 8ರಂದು ಮಂದಿರದ ಆಡಳಿತವನ್ನು ಮೇಲುಸ್ತುವಾರಿ ಸಮಿತಿಗೆ ಹಸ್ತಾಂತರಿಸಿತ್ತು.
ಸದ್ರಿ ಆದೇಶದ ವಿರುದ್ಧ ಮಠದ ವತಿಯಿಂದ ಮೇಲ್ಮನವಿ ಸಲ್ಲಿಸಿ ಮಂದಿರದ ಆಡಳಿತ ನಿರ್ವಹಣಾ ಅವಧಿಯಲ್ಲಿ ಆದಾಯ ತೆರಿಗೆ ಕಾನೂನಿನ ಪ್ರಕಾರ ತೆರಿಗೆ ಪಾವತಿಯಿಂದ ವಿನಾಯತಿ ಪಡೆಯಲಾಗಿತ್ತು. ಜತೆಗೆ ಮಂದಿರದಲ್ಲಿ ನಗದು ರೂಪದಲ್ಲಿ ಸಂಗ್ರಹವಾಗಿದ್ದ ಹುಂಡಿ ಕಾಣಿಕೆ, ಸೇವಾ ಮೊಬಲಗು ಮತ್ತು ವಿವಿಧ ದೇಣಿಗೆಗಳನ್ನು ನೇರವಾಗಿ ಮಂದಿರದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ಕುರಿತಾಗಿ ತೆರಿಗೆ ಇಲಾಖೆಗೆ ಕಾನೂನು ರೀತ್ಯಾ ಸ್ಪಷ್ಟೀಕರಣ ಒದಗಿಸಲಾಗಿದೆ.
ಮಠದ 13 ವರ್ಷದ ಆಡಳಿತ ಅವಧಿಯಲ್ಲಿ ಪ್ರತಿ ವರ್ಷ ಲೆಕ್ಕ ಪರಿಶೋಧನೆ ನಡೆಸುವ ಜತೆಗೆ ಲೆಕ್ಕ ಪತ್ರಗಳನ್ನು ಸುವ್ಯವಸ್ಥಿತವಾಗಿ ದಾಖಲಿಸಲಾಗಿದೆ. ಈ ಪ್ರಕಾರದ ಪಾರದರ್ಶಕ ಆಡಳಿತ ನಿರ್ವಹಣೆಗಾಗಿ ಮಠದ ಆಡಳಿತ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಐಎಸ್‌ಒ ಪ್ರಮಾಣ ಪತ್ರ ಲಭಿಸಿರುವುದನ್ನು ಮೇಲ್ಮನವಿಯಲ್ಲಿ ದೃಢೀಕರಿಸಲಾಗಿತ್ತು. ಇವೆಲ್ಲವುಗಳ ಆಧಾರದ ಮೇರೆಗೆ ಆದಾಯ ಕರ ಇಲಾಖೆ 2015-16ರ ಅವಧಿಯಲ್ಲಿ ಯಾವುದೇ ತೆರಿಗೆ ಬಾಕಿ ಹೊಂದಿರದೆ ಶೂನ್ಯ ತೆರಿಗೆ ಬಾಕಿಯ ಅಧಿಕೃತ ಆದೇಶವನ್ನು ನೀಡಿರುವುದು ಶ್ರೀರಾಮಚಂದ್ರಾಪುರ ಮಠ ನೀಡಿರುವ ಮಾದರಿ ಆಡಳಿತ ವ್ಯವಸ್ಥೆಗೆ ಸಂದ ಗೌರವ ಸನ್ಮಾನವಾಗಿದೆ ಎಂದು ಶ್ಲಾಘಿಸಲಾಗಿದೆ.