

ಗೋಕರ್ಣ: ವರ್ತಮಾನದ ಆಧುನಿಕ ವೈಜ್ಞಾನಿಕ ಕಾಲದಲ್ಲಿ ಕೂಡ ಭಾರತ ಸಮಸ್ತ ವಿಶ್ವದಲ್ಲಿ ತನ್ನದೇಯಾದ ಸನಾತನ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಸಂರಕ್ಷಿಸಿಕೊಂಡು ಮುನ್ನಡೆಯಲು ನಮ್ಮ ಸನಾತನ ವೇದಪರಂಪರೆ ಕಾರಣವಾಗಿದೆ ಎಂದು ಹಿರಿಯ ವೇದವಿದ್ವಾಂಸ ಆಚಾರ್ಯ ನಾರಾಯಣ ಉಮಾಶಿವ ಉಪಾಧ್ಯಾಯ ಹೇಳಿದರು.
ಇಲ್ಲಿನ ಶ್ರೀ ಹರಿಹರೇಶ್ವರ ವೇದ ವಿದ್ಯಾಪೀಠದಲ್ಲಿ ಒಂದು ತಿಂಗಳ ಅಖಂಡವಾಗಿ ನಡೆದ ಅತಿ ಅಪರೂಪದ ಋಗ್ವೇದ ಜಟಾಪಾರಾಯಣ ವೇದಾರಾಧನೆ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿಶ್ವಕ್ಕೆ ವೇದವಿದ್ಯೆಯ ಮುಖೇನ ಸಂಸ್ಕೃತಿ, ಸಂಸ್ಕಾರ ಮತ್ತು ಜ್ಞಾನಶಾಖೆಗಳನ್ನು ಕೊಡುಗೆಯಾಗಿತ್ತ ಆದಿಮೂಲ ನೆಲೆ ಭರತಖಂಡ ಎಂಬ ಕೀರ್ತಿಯಿದೆ. ವೇದಗಳು ಉಳಿದರೆ ಮಾತ್ರ ನಮ್ಮ ಸನಾತನ ಪರಂಪರೆಯ ಭಾರತ ದೇಶ ಉಳಿಯುತ್ತದೆ. ಆಧುನಿಕ ವಿದ್ಯೆಯ ಸೆಳವಿನ ತೀವ್ರತೆ ವೇದವಿದ್ಯೆಯ ಶಿಕ್ಷಣದಲ್ಲಿ ಆಸ್ಥೆ ಮತ್ತು ಆಸಕ್ತಿ ಹೊಂದಿದ ವಿದ್ಯಾರ್ಥಿಗಳ ಅಭಾವಕ್ಕೆ ಕಾರಣವಾಗಿದೆ. ಇಂತಹ ವಿಷಣ್ಣ ಪರಿಸ್ಥಿತಿ ಮಧ್ಯೆಯೂ ಗೋಕರ್ಣ ಕ್ಷೇತ್ರದಲ್ಲಿ ಹರಿಹರೇಶ್ವರ ವಿದ್ಯಾಪೀಠದಂತಹ ಅನೇಕ ವೇದಾಲಯಗಳು ವೇದ ಸಂರಕ್ಷಣೆಯ ಮಹತ್ಕಾರ್ಯ ಮಾಡುತ್ತಿವೆ. ಇದು ಅಪ್ರತಿಮ ಮತ್ತು ಅತ್ಯಪರೂಪದ ಸಾರ್ವಕಾಲಿಕ ಸಾಧನೆಯಾಗಿದೆ. ಇದಕ್ಕೆ ಕಾರಣರಾದ ವಿದ್ಯಾಪೀಠದ ಪ್ರಾಚಾರ್ಯ ವೇ. ಉದಯ ಮಯ್ಯರ್, ಅಧ್ಯಾಪಕರು, ವಿದ್ಯಾರ್ಥಿಗಳು ಅಭಿನಂದನೀಯರು ಎಂದರು.
ಒಂದು ತಿಂಗಳ ಅವಿರತವಾಗಿ ಕಂಠಸ್ಥ ಋಗ್ವೇದ ಜಟಪಾರಾಯಣ ನಿರ್ವಹಿಸಿದ ಉಭಯ ವೇದಘನಪಾಠಿಗಳಾದ ವೇ. ಭಾಗ್ಯಪ್ರಸಾದ ಕುಲಕರ್ಣಿ ಮತ್ತು ವೇ. ವಲ್ಲಭ ಮುಂಡಲೆ ಅವರನ್ನು ಕ್ಷೇತ್ರದ ವತಿಯಿಂದ ಪ್ರಶಸ್ತಿ ಪತ್ರ ಸಮರ್ಪಿಸಿ ಸನ್ಮಾನಿಸಲಾಯಿತು.
ವೇದ ವಿದ್ವಾಂಸರಾದ ಆಚಾರ್ಯ ನಾರಾಯಣ ಉಪಾಧ್ಯಾಯ, ವೇ. ಉದಯ ದ್ವಿಜರಾಜ ಉಪಾಧ್ಯಾಯ, ವೇ. ಕೃಷ್ಣ ಜೋಗಭಟ್ಟ, ವೇ. ಗೋಪಾಲ ಜೋಶಿ, ವೇ. ಸೋಮನಾಥ ಜೋಗಳೇಕರ, ವೇ. ನೀಲಕಂಠ ಜೋಗಳೇಕರ, ವೇ. ಕೃಷ್ಣಮೂರ್ತಿ ಉಪಾಧ್ಯಾಯ, ವೇ. ಆದಿತ್ಯ ಮಾಂಯ್ಕರ್, ವೇ. ರುದ್ರೇಶ ಜೋಶಿ, ವೇ. ಯೋಗೇಶ ಬೋರ್ಕರ್ ಮತ್ತು ವೇ. ಗಣಪತಿ ಶಿವರಾಮ ಭಟ್ಟ ಹಿರೇ ಅವರನ್ನು ಗೌರವಿಸಲಾಯಿತು. ವೇ. ಶ್ರೀನಾಗ ಅಡಿಮುಳೆ, ಕೃಷ್ಣ ಭಟ್ಟ ಧಾರೇಶ್ವರ, ಗಣೇಶ ಜೋಶಿ, ವಿಶ್ವನಾಥ ಭಟ್ಟ ಬಾಳೆಹಿತ್ತಲು, ಗಣೇಶ ಅಡಿಮುಳೆ, ಶಂಕರ ಗೋಪಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ನಿರ್ವಹಿಸಿದರು.