ಗಂಗಾವಳಿಯಲ್ಲಿ ಮುಳುಗಿದ ಗದ್ದೆ

4-gkn-1
Published on

ಗೋಕರ್ಣ: ಹತ್ತಿರದ ಗಂಗಾವಳಿ ನದಿಗೆ ಹೊಂದಿಕೊಂಡಿರುವ 5 ಸಾವಿರ ಎಕರೆಗೂ ಹೆಚ್ಚಿನ ಕೃಷಿ ಭೂಮಿಯಲ್ಲಿ ಉಪ್ಪು ನೀರು ಒಳಸೇರದಂತೆ ತಡೆಯಲು ನದಿತೀರದ ಉದ್ದಕ್ಕೂ ತಡೆಗೋಡೆ ನಿರ್ವಿುಸುವ ಕಾಮಗಾರಿ ಪ್ರಗತಿಯಲ್ಲಿದೆ. ಚಿಕ್ಕ ನೀರಾವರಿ ಇಲಾಖೆ ವತಿಯಿಂದ ನಾಡುಮಾಸ್ಕೇರಿ ಗ್ರಾಪಂನ ಗಂಗಾವಳಿಯಿಂದ ನಾಡುಮಾಸ್ಕೇರಿ, ಹನೇಹಳ್ಳಿ, ಬಂಕಿಕೊಡ್ಲ ಮತ್ತು ಅಂಕೋಲಾ ತಾಲೂಕಿನ ಅಗ್ರಗೋಣದ ವರೆಗೆ 4 ಕಿ.ಮೀ.ಗೂ ಹೆಚ್ಚಿನ ಉದ್ದದಲ್ಲಿ ತಡೆಗೋಡೆ ನಿರ್ವಿುಸಿ ಕಳೆದ ಅನೇಕ ದಶಕಗಳಿಂದ ಉಪ್ಪು ನೀರಿನ ತೊಂದರೆಯಿಂದ ಯಾವುದೇ ಬೆಳೆ ಬೆಳೆಯಲಾಗದ ಈ ಗ್ರಾಮಗಳ ಗದ್ದೆಗಳನ್ನು ಮತ್ತೆ ಕೃಷಿ ಯೋಗ್ಯವಾಗಿಸುವುದು ಈ ಕಾಮಗಾರಿಯ ಉದ್ದೇಶವಾಗಿದೆ. 16 ಕೋಟಿ ರೂ. ಯೋಜನೆ: ಕಳೆದ 2020-21ರಲ್ಲಿ ಕಾಮಗಾರಿಗೆ ಆದೇಶ ಪಡೆದ 16 ಕೋಟಿ ರೂ. ಅಂದಾಜು ವೆಚ್ಚದ ಈ ತಡೆಗೋಡೆ ಯೋಜನೆ ಕೆಲಸಗಳು 2023ರಿಂದ ಪ್ರಾರಂಭವಾಗಿ ಸದ್ಯ ಮುಗಿಯುವ ಹಂತದಲ್ಲಿವೆ. 4 ಕಿ.ಮೀ. ಉದ್ದವಿರುವ ಎತ್ತರದ ತಡೆಗೋಡೆ ಪೈಕಿ ಅಂದಾಜು 1 ಕಿ.ಮೀ. ಭಾಗದ ಕೆಲಸ ಮಾತ್ರ ಬಾಕಿಯಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಎರಡು ತಾಲೂಕು ವ್ಯಾಪ್ತಿಯ ಒಟ್ಟು ಪ್ರದೇಶ ಗಂಗಾವಳಿ ನದಿಯ ಅಂಚಿಗೆ ಉದ್ದಕ್ಕೂ ಹರಡಿಕೊಂಡಿರುವುದರಿಂದ ಸಮುದ್ರದ ಉಪ್ಪು ನೀರು ಈ ಗದ್ದೆಗಳನ್ನು ಆಕ್ರಮಿಸಿಕೊಂಡು ಮೂರು ದಶಕಗಳಿಗೂ ಹೆಚ್ಚಿನ ಸಮಯ ಈ ವಿಶಾಲ ಹರವಿನ ಭೂಮಿಯನ್ನು ಕೃಷಿಯಿಂದ ದೂರಾಗಿಸಿತ್ತು. ಈ ಹಿನ್ನೆಲೆಯಲ್ಲಿ ತಡೆಗೋಡೆಯ ಉದ್ದಕ್ಕೂ ಉಪ್ಪು ನೀರು ಒಳ ನುಗ್ಗದಂತೆ ತಡೆಯಲು ಹಾಗೂ ಗದ್ದೆಗಳ ಮಳೆ ನೀರು ಹೊರಕ್ಕೆ ಹೋಗಲು ಎರಡು ಅತ್ಯಂತ ದೊಡ್ಡ ಜಂತ್ರಡಿ ಸಹಿತ ವಿವಿಧೆಡೆಗಳಲ್ಲಿ ಒಟ್ಟು 16 ಜಂತ್ರಡಿಗಳು ಈಗಾಗಲೇ ನಿರ್ವಣವಾಗಿವೆ. ಈ ಜಂತ್ರಡಿಗಳಿಗೆ ಗೇಟ್ ಜೋಡಿಸುವ ಕಾರ್ಯ ಮಾತ್ರ ಬಾಕಿಯಿದೆ. ಅಕಾಲಿಕ ಮಳೆ ಕಾಟ: ಈ ವರ್ಷ ಮೇ ತಿಂಗಳ ಮಧ್ಯಭಾಗದಲ್ಲಿಯೇ ದಿಢೀರ್ ಆಗಿ ಪ್ರಾರಂಭವಾದ ಅಕಾಲಿಕ ಮಳೆಯಿಂದಾಗಿ ಈ ಗದ್ದೆಗಳಲ್ಲಿ ಮಳೆ ನೀರು ಭಾರೀ ಪ್ರಮಾಣದಲ್ಲಿ ಸಂಗ್ರಹಗೊಳ್ಳುವಂತಾಯಿತು. ಕಾಮಗಾರಿ ಉದ್ದೇಶಕ್ಕಾಗಿ ಉಪ್ಪು ನೀರು ಒಳ ಬಾರದಂತೆ ಜಂತ್ರಡಿಗಳನ್ನು ಮಣ್ಣಿನಿಂದ ಮುಚ್ಚಲಾಗಿರುವುದರಿಂದ ಈ ಗದ್ದೆಗಳಲ್ಲಿ ಜಮಾಗೊಂಡ ಮಳೆ ನೀರು ಹೊರ ಹೋಗಲಾಗದೇ ಈಗ ರೈತರು ಕೃಷಿ ಕೆಲಸ ಪ್ರಾರಂಭಿಸಲು ಅಸಾಧ್ಯವಾಗಿದೆ. ಈಗಾಗಲೇ ಭತ್ತದ ಗದ್ದೆಗಳಿಗೆ ಗೊಬ್ಬರ ಹಾಕುವ ಕಾರ್ಯ ನಡೆಯಬೇಕಿತ್ತು. ಆದರೆ, ಗದ್ದೆಗಳಲ್ಲಿ ಮೊಳಕಾಲು ಮಟ್ಟ ನೀರು ತುಂಬಿರುವುದರಿಂದ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ರೈತರದ್ದಾಗಿದೆ. ಆದಷ್ಟು ಬೇಗ ಜಂತ್ರಡಿಗಳಿಗೆ ಗೇಟ್ ಜೋಡಿಸಲು ರೈತರು ಮನವಿ ಮಾಡಿದ್ದಾರೆ. ಈ ಸಂಬಂಧ ಗ್ರಾಪಂಗೆ ರೈತರು ಮನವಿ ನೀಡಿದ್ದು ಅದರ ಪ್ರಕಾರ ಚಿಕ್ಕ ನೀರಾವರಿ ಇಲಾಖೆಗೆ ಗ್ರಾಪಂ ವತಿಯಿಂದ ರೈತರ ತೊಂದರೆಯನ್ನು ಮನದಟ್ಟು ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚಿಕ್ಕ ನೀರಾವರಿ ಇಲಾಖೆ ಇಂಜನಿಯರ್ ಅವರು ತಡೆಗೋಡೆಗೆ ಅಗತ್ಯವಿರುವ ಎಲ್ಲ ಗೇಟ್​ಗಳು ಈಗಾಗಲೇ ಸಿದ್ಧಗೊಂಡಿವೆ. ಟನ್ ತೂಕದಲ್ಲಿ ಅತಿಯಾಗಿ ಭಾರವಿರುವ ಈ ಗೇಟ್​ಗಳನ್ನು ಬೃಹತ್ ಕ್ರೇನ್ ಬಳಸಿ ಮಾತ್ರ ಇಲ್ಲಿಗೆ ತಂದು ಜೋಡಿಸಬೇಕಾಗುತ್ತದೆ. ಎರಡು ವಾರದಿಂದ ನಿರಂತರ ಮಳೆಯಿಂದ ಭಾರೀ ಭಾರದ ಕ್ರೇನ್​ಗಳನ್ನು ಇನ್ನೂ ಗಟ್ಟಯಾಗಿರದ ತಡೆಗೋಡೆಯ ಹಸಿ ಮಣ್ಣಿನ ಮೇಲೆ ಓಡಿಸಿ ಕಾಮಗಾರಿ ನಡೆಸುವುದು ಅಪಾಯಕರಿ. ಈ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ವಿಳಂಬವಾಗಿದೆಯಾಗಿ ಎಂದು ತಿಳಿಸಲಾಗಿದೆ.

ಅನಿರೀಕ್ಷಿತ ಮಳೆಯಿಂದ ಅತ್ಯಂತ ಭಾರದ ಗೇಟ್​ಗಳ ಸಾಗಾಟ ಮತ್ತು ಅವುಗಳ ಜೋಡಣೆಯಲ್ಲಿ ಅಡಚಣೆ ಉಂಟಾಯಿತು. ಆದಷ್ಟು ಬೇಗ ಎಲ್ಲ ಜಂತ್ರಡಿಗಳಿಗೆ ಇವುಗಳನ್ನು ಅಳವಡಿಸುವ ಕೆಲಸ ಪ್ರಾರಂಭಿಸಲಾಗುವುದು. ಇದರೊಂದಿಗೆ ಗದ್ದೆಗಳಲ್ಲಿ ಶೇಖರಣೆ ಆಗಿರುವ ಮಳೆ ನೀರು ಹೊರ ಸಾಗಿಸುವ ವ್ಯವಸ್ಥೆ ಮಾಡಿ ಕೃಷಿ ಕೆಲಸಗಳಿಗೆ ಅನುಕೂಲ ಮಾಡಲಾಗುವುದು. | ಅಮಿತಾ ತಳೇಕರ್ ಸಹಾಯಕ ಇಂಜಿನಿಯರ್ ಚಿಕ್ಕ ನೀರಾವರಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net