ಗೋಕರ್ಣದಲ್ಲಿ ದಾದುಮ್ಮನ ಮದುವೆ

gkn- dadummana maduve
Published on

ಗೋಕರ್ಣ: ಇಲ್ಲಿನ ಹಾಲಕ್ಕಿ ಒಕ್ಕಲಿಗರ ವಿಶಿಷ್ಟ ಸಂಪ್ರದಾಯದ ಪಾರಂಪರಿಕ, ಜನಪದೀಯ ಆಚರಣೆಯ ‘ದಾದುಮ್ಮನ ಮದುವೆ’ ಭಾನುವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಹಾಲಕ್ಕಿಗಳ ಜನಪದದಲ್ಲಿ ದೇವೇಂದ್ರನನ್ನು ದಾದುಮ್ಮ ಎಂದು ಪ್ರೀತಿ ಗೌರವದಿಂದ ಕರೆಯಲಾಗುತ್ತದೆ. ಮಳೆಯನ್ನು ದಯಪಾಲಿಸುವವನು ಎಂದು ನಂಬಿ ಪೂಜಿಸಲಾಗುವ ದೇವೇಂದ್ರನ ಪ್ರೀತ್ಯರ್ಥ ಈ ವಿವಾಹವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪ್ರತಿ ವರ್ಷ ಆಷಾಢ ಅಮಾವಾಸ್ಯೆಯಂದು ನೆರವೇರಿಸಲಾಗುತ್ತದೆ.
ಮಾತೃ ಪ್ರಧಾನ: ಈ ವಿವಾಹ ಸಂಪೂರ್ಣವಾಗಿ ಮಾತೃ ಪ್ರಧಾನವಾದುದು. ಇದರ ಪ್ರಮುಖ ನಿರ್ವಹಣೆ ಮಹಿಳೆಯರು ಮತ್ತು ಮಾತೆಯರು ನೋಡಿಕೊಳ್ಳುತ್ತಾರೆ. ಅಪರೂಪದ ಈ ಲಗ್ನದಲ್ಲಿ ವಧುವಿನ ಜತೆಗೆ ವರ ಕೂಡ ಮಹಿಳೆಯೇ ಆಗಿರುತ್ತಾಳೆ. ಈ ಶುಭ ಕಾರ್ಯದಲ್ಲಿ ಪುರುಷರು ಸಭಿಕರು ಮಾತ್ರ. ಸಂಲಗ್ನದ ಯಾವುದೇ ವಿಧಿ ವಿಧಾನಗಳಲ್ಲಿ ಗಂಡು ಪಾಲ್ಗೊಳ್ಳುವಂತಿಲ್ಲ. ಏಕಾದಶಿಯಂದು ವಿವಾಹದ ಬಗ್ಗೆ ಸೇರುವ ಮಹಿಳೆಯರು ವರ ಮತ್ತು ವಧು ಯಾರಾಗಬೇಕೆಂದು ಆಯ್ಕೆ ಮಾಡುತ್ತಾರೆ.
ಈ ವರ್ಷ ಪಾರ್ವತಿ ವೆಂಕಟೇಶ ಗೌಡ ಕಲ್ಲರೆಮನೆ ಮತ್ತು ಸವಿತಾ ಕೃಷ್ಣ ಗೌಡ ಅಂಗಯ್ಯನ ಮನೆ ವಧು ಮತ್ತು ವರನಾಗಿ ಕರ್ತವ್ಯ ನಿಭಾಯಿಸಿದರು. ಶ್ರೀಕೇತಕಿ ವಿನಾಯಕ ಮತ್ತು ಶ್ರೀಕರಿದೇವರ ಸನ್ನಿಧಾನದಿಂದ ಸಂಭ್ರಮದಿಂದ ಮಂಗಳ ವಾದ್ಯ ಮತ್ತು ಭವ್ಯ ಮೆರವಣೆಗೆಯಲ್ಲಿ ಬರುವ ದಿಬ್ಬಣ ಪ್ರಮುಖ ಊರ ಗೌಡರ ಮನೆಗೆ ಸಾಗುತ್ತದೆ. ಅಲ್ಲಿ ವಿವಾಹದ ಎಲ್ಲ ಪದ್ಧತಿಗಳು ನಡೆದು ಉಡುಗೊರೆ ಶಾಸ್ತ್ರ ಮತ್ತು ಮುತ್ತೈದೆಯರು ಮಂಗಳಾರತಿ ಬೆಳಗಿ ಶುಭ ಹಾರೈಸಿದರು. ಮದುವೆ ವೀಕ್ಷಿಸಲು ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net