ಇಹ-ಪರಕ್ಕೆ ಸದ್ಧರ್ಮವೊಂದೇ ಪರಮಸ್ನೇಹಿತ

11-gkn-raghav shree
Published on

ಗೋಕರ್ಣ: ನಾವು ಬದುಕಿನಲ್ಲಿ ಯಾವ್ಯಾವುದಕ್ಕೆ ಬೆಲೆ ಕೊಡುತ್ತೇವೆಯೋ ಅವುಗಳೆಂದೂ ಪರಲೋಕ ಯಾನದಲ್ಲಿ ಗಣನೆಗೆ ಬಾರವು. ಧನ, ಸಂಪತ್ತು, ರೂಪ, ಯೌವ್ವನ, ರಾಜ್ಯ, ಕೋಶ ಇವುಗಳು ನಮ್ಮ ಅಂತಿಮ ಯಾತ್ರೆಯಲ್ಲಿ ಯಾವುದೇ ಉಪಯೋಗಕ್ಕೆ ಸಿಗದು. ಜೀವನ-ಉಜ್ಜೀವನದಿಂದ ಕೂಡಿದ ಇಹ-ಪರಕ್ಕೆ ಸದ್ಧರ್ಮವೊಂದೇ ಪರಮಸ್ನೇಹಿತ ಎನ್ನುವುದನ್ನು ಧರ್ಮರಾಜನ ನೇತೃತ್ವದಲ್ಲಿ ಸಾಗಿದ ಪಾಂಡವರ ಮಹಾಪ್ರಸ್ಥಾನ ದೃಢೀಕರಿಸುತ್ತದೆ ಎಂದು ಶ್ರೀ ರಾಮಚಂದ್ರಾಪುರಮಠದ ಪೀಠಾಧ್ಯಕ್ಷ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವರ್ಣಿಸಿದರು.

31ನೇ ಅನಾವರಣ ಚಾತುರ್ವಸ್ಯ ವ್ರತನಿಷ್ಠ ಅಶೋಕೆಯ ಗುರುದೃಷ್ಟಿ ಭವನದಲ್ಲಿ ಭಾನುವಾರ ಜರುಗಿದ ಚಾತುರ್ವಸ್ಯ ಧರ್ಮಸಭೆಯಲ್ಲಿ ಜೀವಯಾನ ಕುರಿತ ಪ್ರವಚನದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಸತ್ವಗುಣ ಪ್ರಧಾನ: ಜಗತ್ತು ರಜಸ್ಸು ಮತ್ತು ತಮೋ ಗುಣಕ್ಕೆ ಪ್ರಾಧಾನ್ಯ ನೀಡುತ್ತದೆ. ಹಾಗಾಗಿ ಹೆಚ್ಚಿನವರು ರಜಸ್ ಮತ್ತು ತಮಸ್ ಗುಣಶೀಲ ಉಳ್ಳವರಾಗಿದ್ದೇವೆ. ಅಬ್ಬರ, ಬೊಬ್ಬೆ, ಜೋರು, ಆಡಂಬರ ಕಂಡರೆ ಪರಮ ಖುಷಿ. ಧರ್ಮ ಪ್ರಾಮುಖ್ಯದ, ಶಾಂತವಾದ, ಮಂದವಾದ ಸತ್ವಗುಣದಲ್ಲಿ ಆಸಕ್ತಿ ಕಡಿಮೆ. ಧರ್ಮ ಯಾವತ್ತೂ ಸತ್ವಗುಣ ಪ್ರಧಾನ. ಯಕ್ಷಗಾನದಲ್ಲಿ ಅಬ್ಬರದ ಪಾತ್ರ ಬಂದರೆ ಎವೆಯಿಕ್ಕದೆ ನೋಡುತ್ತೇವೆ. ಈ ಗುಣಗಳಿಂದ ಹೊರತಾದ ಪಾತ್ರದಲ್ಲಿ ನಮಗೆ ತೂಕಡಿಕೆ ಬರುತ್ತದೆ. ಮಾಂಡವ್ಯ ಮುನಿಗಳಿಂದ ಶಾಪಗ್ರಸ್ತನಾದ ಯಮಧರ್ಮ ಭೂಲೋಕದಲ್ಲಿ ವಿದುರ ಮತ್ತು ಯುಧಿಷ್ಠಿರ (ಧರ್ಮರಾಜ) ಆಗಿ ಎರಡು ಜನ್ಮ ತಾಳುತ್ತಾನೆ. ಮಹಾಭಾರತಕ್ಕೆ ನಿಜವಾದ ನಾಯಕ ಸತ್ವಗುಣ ಸಂಪನ್ನನಾದ ಧರ್ಮರಾಜ. ಗುರುಗ್ರಹದ ಗುಣಾಧಿಕ್ಯವನ್ನು ಪೆಡೆದ ಧರ್ಮಜ ಅಜಾತಶತ್ರು!ಸರ್ವೆ ಜನಾಃ ಸುಖಿನೋ ಭವಂತು ಎಂದು ಹೇಳುವಷ್ಟು ಸುಲಭ, ಅದರ ಅನುಕರಣೆಯಲ್ಲ. ಅದನ್ನು ಅನುಸರಿಸಿ ತೋರಿದ ಮಹಾತ್ಮ ಧರ್ಮರಾಜ. ಇಂತಹ ಧರ್ಮಜನಿಗೆ ಶ್ರೀಕೃಷ್ಣ ಪರಮಪದ ಸೇರಿದ ವಾರ್ತೆ ಕೇಳಿ ಜೀವಯಾನ ಸಾಕೆನಿಸುತ್ತದೆ. ಕಾರಣ ದ್ರೌಪದಿ ಸಹಿತ ತನ್ನ ಸಹೋದರರ ಜತೆಗೂಡಿ ಮಹಾಪ್ರಸ್ಥಾನಕ್ಕೆ ಅಣಿಯಾಗುತ್ತಾನೆ ಎಂದರು.

ಬೆಂಗಳೂರು ಉತ್ತರ ಮಂಡಲದಿಂದ ಭಾನುವಾರದ ಭಿಕ್ಷಾಸೇವೆ ಸಮರ್ಪಿತವಾಯಿತು. 13 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ಜಲಮಂಡಲವನ್ನು ಅಕೋಡ್ಲು ಗಣೇಶ ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ, ಉದಯಶಂಕರ ಭಟ್ಟ ಮಿತ್ತೂರು, ಜಿ.ಜಿ. ಹೆಗಡೆ ತಲೆಕೇರಿ, ಬೆಂಗಳೂರು ಉತ್ತರ ಮಂಡಲ ಕಾರ್ಯದರ್ಶಿ ಕೆ.ಬಿ. ರಾಮಮೂರ್ತಿ ಮತ್ತಿತರರಿದ್ದರು. ಸುಧನ್ವ ಆರ್ಯ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net