ಜಾರಕಿಹೊಳಿ ತವರಲ್ಲಿ ಉದ್ವಿಗ್ನ ಸ್ಥಿತಿ: 10 ಬಸ್​ಗಳಿಗೆ ಕಲ್ಲು, ಕಾವೇರಿದ ಪ್ರತಿಭಟನೆ

ramesh-jarakiholi gokak
Published on

ಬೆಳಗಾವಿ: ರಮೇಶ್​ ಜಾರಕಿಹೊಳಿ ಅವರ ತವರಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪ್ರತಿಭಟನಾಕಾರರು ಸುಮಾರು 10 ಬಸ್​ಗಳಿಗೆ ಕಲ್ಲು ತೂರಿದ್ದಾರೆ.

ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಹುಕರ್​ನ ಸ್ವಕ್ಷೇತ್ರ ಗೋಕಾಕ್​ನಲ್ಲಿ ಅವರ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ. ಅಯ್ಯೋಯ್ಯೋ ಅನ್ಯಾಯ… ಎಂದು ಕೂಗಾಡುತ್ತ ಬಸವೇಶ್ವರ ವೃತ್ತದಲ್ಲಿ ಹೈಡ್ರಾಮ ಮಾಡಿದ​ ಜಾರಕಿಹೊಳಿ ಬೆಂಬಲಿಗರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಗೋಕಾಕ್​ ನಗರ ಬಂದ್​ಗೆ ಆಗ್ರಹಿಸಿ ಅಂಗಡಿಗಳನ್ನ ಮುಚ್ಚಿಸಿದ್ದರು. ಅಲ್ಲದೆ, ಬಂದ್​ಗೆ ಕರೆ ನೀಡಿದ್ದ ಅವರು, ಕಂಡ ಕಂಡ ಬಸ್​ಗೆ ಕಲ್ಲೂ ತೂರಿದ್ದಾರೆ. ಇದನ್ನೂ ಓದಿರಿ ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಸಿಡಿ ನನ್ನ ಬಳಿ ಇದೆ, ಎಲ್ಲರೂ ಹಾಲಿಗಳೇ…

ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಅಲ್ಲದೆ ರಾಜ್ಯ ಸರ್ಕಾರಕ್ಕೂ ಮುಜುಗರ ಉಂಟಾಗಿದ್ದು, ವಿಪಕ್ಷಗಳಿಂದಲೂ ರಾಜೀನಾಮೆ ಪಡೆಯುವಂತೆ ಆಗ್ರಹ ಕೇಳಿಬಂದಿತ್ತು. ಹಲವೆಡೆ ಕಾಂಗ್ರೆಸ್​-ಜೆಡಿಎಸ್​ ಕಾರ್ಯಕರ್ತರು ಪ್ರತ್ಯೇಕವಾಗಿ ಬೀದಿಗಿಳಿದು ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಸಚಿವ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇತ್ತ ನಾನು ಯಾವ ತಪ್ಪನ್ನೂ ಮಾಡಿಲ್ಲ, ನಾನೇಕೆ ರಾಜೀನಾಮೆ ಕೊಡಲಿ ಎಂದು ಜಾರಕಿಹೊಳಿ ಹೇಳಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ರಾಜೀನಾಮೆ ಪಡೆಯಬೇಕೆಂದು ಸಿಎಂ ಯಡಿಯೂರಪ್ಪಗೆ ಪಕ್ಷದ ಹೈಕಮಾಂಡ್​ ಸೂಚಿಸಿತ್ತು. ಇದರ ಬೆನ್ನಲ್ಲೇ ರಮೇಶ್​ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಮೇಶ್​ ಜಾರಕಿಹೊಳಿ ಅವರದ್ದು ತಪ್ಪಿಲ್ಲ, ಯಾರೋ ದುರುದ್ದೇಶದಿಂದ ಇಂತಹ ವಿಡಿಯೋ ಸೃಷ್ಟಿಸಿದ್ದಾರೆ. ಜಾರಕಿಹೊಳಿಯ ರಾಜೀನಾಮೆಯನ್ನ ಸಿಎಂ ಅಂಗೀಕರಿಸಬಾರದು ಎಂದು ಆಗ್ರಹಿಸುತ್ತಿರುವ ಜಾರಕಿಹೊಳಿ ಬೆಂಬಲಿಗರು ಬೀದಿಗಿಳಿದು ಹೋರಾಡುತ್ತಿದ್ದಾರೆ.

ಗೋಕಾಕ ತಾಲೂಕಿನ ಪಾಲ್ಸ್​ನಲ್ಲಿರುವ ಗೋಕಾಕ ಹತ್ತಿ ಗಿರಣಿಯ ಸಾವಿರಾರು ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಏಕಾಏಕಿ ಪ್ರತಿಭಟನೆಗೆ ಕುಳಿತರು. ರಮೇಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಷಡ್ಯಂತರ ನಡೆದಿದೆ ಎಂದು ಆರೋಪಿಸಿದರು.

ರಮೇಶ್ ಜಾರಕಿಹೊಳಿ ಬೆಂಬಲಿಸಿ ನಡೆಯುತ್ತಿದ್ದ ವೇಳೆ ಗೋಕಾಕ್​ ಬಸ್ ನಿಲ್ದಾಣದಲ್ಲಿ ನಿಂತಿದ್ದ 2 ಸರ್ಕಾರಿ ಬಸ್​ ಸೇರಿದಂತೆ 10 ಬಸ್​ಗಳಿಗೆ ಕಲ್ಲು ತೂರಿದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಕಿಡಗೇಡಿಗಳ ಪುಂಡಾಟಕ್ಕೆ ಸಾರಿಗೆ ವಾಹನಗಳು ಜಖಂಗೊಂಡಿವೆ.

ಪ್ರತಿಭಟನೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲೇ ನಿಂತು ಹೈರಾಣಾಗಿದ್ದರು. ಮನೆಗೆ ಹೋಗಲಾಗದೆ ಬಿಸಿಲಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನು ಗೋಕಾಕ್​ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ಅವರು ಸ್ವಂತ ಖರ್ಚಿನಲ್ಲಿ ಮ್ಯಾಕ್ಸಿ ಕ್ಯಾಬ್ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net