

ಬೆಳಗಾವಿ : ಬೆಂಗಳೂರಿನ ವಿಧಾನ ಸೌಧ ಹಾಗೂ ಬೆಳಗಾವಿಯ ಸುವರ್ಣ ಸೌಧದ ವಿದ್ಯುತ ದೀಪಾಲಂಕಾರಕ್ಕಾಗಿ ಕಳೆದ 5 ವರ್ಷಗಳಲ್ಲಿ 12.17 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ, ಇಲ್ಲಿ ಹಾಳಾದ ಬಲ್ಬ್, ವೈರ್‌ಗಳನ್ನು ಬದಲಾಯಿಸಲು ಮತ್ತು ವಿದ್ಯುತ್ ಕಚೇರಿಗೆ ವೆಚ್ಚ ಮಾಡಿದ ಮಾಹಿತಿ ಬಹಿರಂಗ ಪಡಿಸದಿರುವುದು ಹಲವು ಅನುಮಾನ ಹುಟ್ಟುಹಾಕಿದೆ.
ಬೆಳಗಾವಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಅಧಿಕಾರಿಗಳು ವಿವರವಾದ ಮಾಹಿತಿ ನೀಡಿದ್ದು, ಕಳೆದ 2018ರ ಏಪ್ರೀಲ್‌ನಿಂದ 2023ರ ಮೇ ವರೆಗೆ ವರೆಗಿನ ಅವಧಿಯಲ್ಲಿ ವಿಧಾನಸೌಧ ಹಾಗೂ ಸುವರ್ಣ ಸೌಧದಲ್ಲಿರುವ ಕಚೇರಿಗಳಲ್ಲಿ ಬಳಕೆ ಮಾಡಲಾಗಿರುವ ವಿದ್ಯುತ್ ಬಿಲ್ ಕ್ರಮವಾಗಿ 8,47,10,396 ರೂ. ಹಾಗೂ 3,70,06,518 ರೂ.ಗಳು ಸೇರಿದಂತೆ ಒಟ್ಟು 12,17,16,914 ರೂ.ಗಳನ್ನು ಸರ್ಕಾರ ವಿದ್ಯುತ್ ನಿಗಮಕ್ಕೆ ಪಾವತಿಸಿದೆ.
ಇನ್ನು ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಾಗೂ ರಾಷ್ಟ್ರಪತಿಗಳು ಬೆಂಗಳೂರಿಗೆ ಆಗಮಿಸಿದ ಸಮಯದಲ್ಲಿ ವಿಧಾನ ಸೌಧ ಮತ್ತು ಸುವರ್ಣ ಸೌಧಗಳ ವಿಶೇಷ ದೀಪಾಲಂಕಾರಕ್ಕಾಗಿ 1,32,20,654 ರೂ. ವೆಚ್ಚವಾಗಿದೆ.
ಕಳೆದ ಸೆ.27ರಂದು ರಾಷ್ಟ್ರಪತಿ ಆಗಮಿಸಿದ್ದಾಗ ಒಂದೇ ದಿನದ ದೀಪಾಲಂಕಾರಕ್ಕಾಗಿ 13,55,517 ರೂ.ಗಳನ್ನು ವೆಚ್ಚ ಮಾಡಲಾಗಿದೆ. 2021ರ ಎಪ್ರಿಲ್ ತಿಂಗಳಲ್ಲಿ ಅತೀ ಹೆಚ್ಚು ವಿದ್ಯುತ್ ಬಿಲ್ 29,38,997 ರೂ. ಅತಿ ಕಡಿಮೆ ಎಂದರೆ 2019ರ ಜುಲೈ ತಿಂಗಳ 69,964 ರೂ. ಬಿಲ್ ಪಾವತಿಸಲಾಗಿದೆ ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ.