

ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಶೋಧನಾ ಭವನದ ಮೂಲಕ ಪರಂಪರಾ ವಿದ್ಯೆ, ಕಲೆಗಳ ಸಂಶೋಧನೆ ಮತ್ತು ಬೋಧನೆ ಆಗಬೇಕೆಂಬ ಅಪೇಕ್ಷೆ ನೂತನ ಮತ್ತು ಆಧುನಿಕ ತಾಳೆಗರಿ ಸ್ಕಾೃನರ್ ಲೋಕಾರ್ಪಣೆ ಮೂಲಕ ಶುಭಾರಂಭವಾಗಿದೆ ಎಂದು ಸಂಘಟನಾ ಚಾತುರ್ಮಾಸ್ಯ ದೀಕ್ಷಾಬದ್ಧರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯಲ್ಲಿ ಬೆಳ್ತಂಗಡಿಯ ರೋಟರಿ ಕ್ಲಬ್ ಕೊಡುಗೆಯಾಗಿ ಸಮರ್ಪಿಸಿದ ತಾಳೆಗರಿಗಳ ಸ್ಕಾೃನರ್ ಉದ್ಘಾಟಿಸಿ ಶ್ರೀಗಳು ಆಶೀರ್ವದಿಸಿದರು.
ಅಶೋಕೆಯಲ್ಲಿನ ವಿಶ್ವವಿದ್ಯಾಪೀಠ ತನ್ನ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದು ವಿನೂತನ ಸಂಶೋಧನೆಗಳ ನೋಂದಣಿಯ ಸುದಿನವೂ ಆಗಿದೆ. ನಮ್ಮ ಮಠದಲ್ಲಿ ಪುರಾತನ ಸಾವಿರಾರು ತಾಳೆಗರಿಯ ಗ್ರಂಥಗಳಿವೆ. ಆ ಗ್ರಂಥಗಳಲ್ಲಿ ಲಕ್ಷಾಂತರ ಲಿಖಿತ ತಾಳೆಗರಿಗಳಿವೆ. ನಮ್ಮ ಸಂಶೋಧನಾ ಭವನದಿಂದ ಮುಖ್ಯವಾಗಿ ಪರಂಪರೆಯ ಪ್ರಧಾನ 4 ವಿದ್ಯೆಗಳ ಮೇಲೆ ವ್ಯವಸ್ಥಿತ ಸಂಶೋಧನೆ ಇದರೊಂದಿಗೆ ಪ್ರಾರಂಭವಾಗಲಿದೆ ಎಂದರು.
ನಮ್ಮ ಸನಾತನ ಯೋಗವಿದ್ಯೆ, ಆಯುರ್ವೇದ, ಭಾರತೀಯ ಅರ್ಥಶಾಸ್ತ್ರ ಮತ್ತು ಧರ್ಮಶಾಸ್ತ್ರಗಳನ್ನು ಸಂಶೋಧಿಸಿ ಅವುಗಳು ಇಂದಿನ ಆಧುನಿಕ ಭಾರತದಲ್ಲಿ ಎಷ್ಟು ಪ್ರಸ್ತುತ. ಅವುಗಳ ನಿಯಮಗಳನ್ನು ಇವತ್ತು ಅನುಸರಿಸಿದರೆ ಎಷ್ಟರಮಟ್ಟಿಗೆ ಗುಣ ಲಭ್ಯವಾಗಲಿವೆ. ಅಥವಾ ಅನುಸರಿಸದಿದ್ದರೆ ಎಷ್ಟು ಹಾನಿ ಎನ್ನುವುದರತ್ತ ಈ ಸಂಶೋಧನೆಗಳು ಬೆಳಕು ಬೀರಲಿವೆ. ದೇಶದ ದೊಡ್ಡ ವಿದ್ವಾಂಸರು ಮತ್ತು ಸಶೋಧಕರು ಈಗಾಗಲೇ ಕೈಜೋಡಿಸಿದ್ದಾರೆ ಎಂದರು.
ಅಶೋಕೆಯಲ್ಲಿ ವಿನೂತನ ಪ್ರಯೋಗಗಳು, ಕಾರ್ಯಾಗಾರಗಳು ಮತ್ತು ವಿಶಿಷ್ಟ ಪರಿಪಕ್ವ ಸಮಾಲೋಚನೆಗಳ ಮುಖೇನ ಹೊಸ ವಾತಾವರಣ ನಿರ್ಮಾಣವಾಗಲಿದೆ. ಈ ಸಂಶೋಧನೆ ಕೇವಲ ವಿದ್ವತ್ ವಿಷಯವಾಗಿ ಮಾತ್ರ ಉಳಿದು ಬೆಳೆಯದೆ ಅದರ ಪ್ರಯೋಜನ ವಿದ್ಯಾರ್ಥಿಗಳು, ಜನರಿಗೆ ದೊರಕಬೇಕು ಎಂಬುದು ವಿಶ್ವವಿದ್ಯಾಪೀಠದ ಮೂಲೋದ್ದೇಶವಾಗಿದೆ. ಇಂತಹ ಅಪೂರ್ವ ಮಹತ್ಕಾರ್ಯದಲ್ಲಿ ಭಾಗಿಗಳಾಗುವ ಎಲ್ಲರಿಗೂ ಜೀವನ ಸಾರ್ಥಕತೆ ಲಭಿಸುವಂತಾಗಲಿ ಎಂದರು.
ಬೆಳ್ತಂಗಡಿ ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಎಲ್ಲ ಭಕ್ತರನ್ನು ಶ್ರೀಗಳು ಆಶೀರ್ವಾದವಿತ್ತು ಹರಸಿದರು. ಕ್ಲಬ್ ಅಧ್ಯಕ್ಷ ಅನಂತ ಭಟ್ಟ ಮಚ್ಚಿಮಲೆ, ಕಾರ್ಯದರ್ಶಿ ವಿದ್ಯಾಕುಮಾರ ಕಾಂಚೋಡು, ಸದಸ್ಯರಾದ ರಾಜಗೋಪಾಲ ಭಟ್ಟ ಕುಂಡಡ್ಕ, ಸೋಮನಾಥ ವರ್ಪುಳೆ, ಉದಯಶಂಕರ ಭಟ್ಟ ಅರಸಿನಮಕ್ಕಿ ಮತ್ತು ಚಾತುರ್ಮಾಸ್ಯ ಸಮಿತಿ ಪ್ರಮುಖರಿದ್ದರು.