

ಸೊರಬ: ಭಾರತೀಯ ಪರಂಪರೆಯಲ್ಲಿ ದೇವರ ಕಲ್ಪನೆ ಉಗಮವಾದ ಉದ್ದೇಶವೇ ಭಕ್ತರ ಅಂತರAಗದ ವಿಕಾಸವೇ ಹೊರತು ಬಾಹ್ಯ ಪೂಜೆಯ ಆಡಂಬರವಲ್ಲ ಎಂದು ಜಡೆ ಹಿರೇಮಠದ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ 109ನೇ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮುಕ್ತಿಯನ್ನು ಪಡೆಯಬೇಕೆಂಬುದು ಎಲ್ಲ ದರ್ಶನಗಳ ಸಾರವಾಗಿದೆ. ಮುಕ್ತಿ ಎಂದರೆ ವ್ಯಕ್ತಿ ಮರಣ ಹೊಂದಿದ ನಂತರ ಸಿಗುವುದಲ್ಲ. ಅದು ಬದುಕಿದ್ದಾಗಲೇ ಅನುಭವಿಸುವ ಸ್ಥಿತಿ. ಮುಕ್ತಿ ಎಂಬುದೊAದು ಮನಸ್ಥಿತಿ. ಸಾಂಸಾರಿಕ ಜೀವನದಲ್ಲಿ ತೃಪ್ತವಾಗಿರುವ ಮನಸ್ಥಿತಿಯೇ ಮುಕ್ತಿ. ಶಾಂತಿ, ಸಮಾಧಾನದ ಸಂಸ್ಥಿತಿಯೇ ಮುಕ್ತ ಸ್ಥಿತಿ. ನೆಮ್ಮದಿ, ಸಮಾಧಾನದ ಸಮಸ್ಥಿತಿಯೇ ಮುಕ್ತಿ ಎಂದು ಬಣ್ಣಿಸಿದರು.
ಬಹಿರಂಗದ ದೇವಾಲಯಗಳಲ್ಲಿರುವ ದೇವರ ಮೂರ್ತಿಯನ್ನು ಮನಸ್ಸಿನಲ್ಲಿ ಸ್ಥಾಪಿಸಿಕೊಂಡು, ಆ ಭಾವಚಿತ್ರವನ್ನು ಅನುಸಂಧಾನಿಸಬೇಕು. ಅದೇ ಧ್ಯಾನ. ಈ ಧ್ಯಾನವೇ ಗಟ್ಟಿಗೊಂಡರೆ ಸಮಾಽ. ಭಾರತೀಯ ಷಡ್ದರ್ಶನಗಳೂ, ವೇದಾಂತಗಳೂ ಇದನ್ನೇ ಸಾರಿ ಸಾರಿ ಹೇಳಿವೆ. ಹಠಯೋಗ, ರಾಜಯೋಗ, ಭಕ್ತಿಯೋಗ, ಮಂತ್ರಯೋಗ, ಲಯಯೋಗ, ಜಪಯೋಗ, ಅಲ್ಲದೇ ಶಿವಯೋಗ ಈ ಎಲ್ಲ ಯೋಗದ ಸಾರವೇ ಮುಕ್ತಿ. ಅದು ಭಗವದ್ದರ್ಶನದ ಮೂಲ ಎಂದರು.
ನಿಜಗುಣ ಚಂದ್ರಶೇಖರ ಮಾತನಾಡಿ, ಆಧುನಿಕ ಯುಗದಲ್ಲಿ ನಮ್ಮ ಯುವ ಪೀಳಿಗೆ ದಾರಿ ತಪ್ಪುತ್ತಿದೆ. ಇದು ನಮ್ಮ ಸಂಸ್ಕೃತಿಯ ಅವನತಿಗೆ ಸೋಪಾನವಾಗುತ್ತಿದೆ. ಇದನ್ನು ತಡೆಯಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.
ಅಕ್ಕನ ಬಳಗದ ಸದಸ್ಯರಿಂದ ಭಜನೆ ನೆರವೇರಿತು. ರೇಖಮ್ಮ ಸಣ್ಣಲಿಂಗಣ್ಣನವರ್, ಸುಶೀಲಮ್ಮ, ಎಂ.ಲತಾ, ಜಯಮಾಲಾ ಅಣ್ಣಾಜಿ ಗೌಡ, ವಿಶ್ವನಾಥ ಗೌಡ, ಮಂಜಣ್ಣ ಹೊಸಕೊಪ್ಪ, ನಾಗರಾಜ ಗುತ್ತಿ, ಇಂದೂಧರ, ಸುನೀತಾ, ರೇವತಿ, ಗಂಗಾಧರ, ದಿವ್ಯದರ್ಶನ, ಉಮಾ ಇತರರಿದ್ದರು.