

ನೆಲಮಂಗಲ: ಮನುಷ್ಯನಿಗೆ ಜೀವಿತಾವಧಿಯಲ್ಲಿ ಬರುವ ಕಷ್ಟ ಎದುರಿಸುವ ಶಕ್ತಿ ದೇವರ ಅನುಗ್ರಹದಿಂದ ದೊರೆಯಲಿದೆ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ಅಭಿಪ್ರಾಯಪಟ್ಟರು.
ತಾಲೂಕಿನ ರೈಲ್ವೆಗೊಲ್ಲಹಳ್ಳಿಯಲ್ಲಿ ಪುನಃ ನಿರ್ಮಿಸಿದ್ದ ನೂತನ ಶ್ರೀ ಆದಿ ಶಕ್ತಿ ರೇಣುಕಾಯಲ್ಲಮ್ಮ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೊನಾ ಸೋಂಕಿನಿಂದ ಜಗತ್ತಿನಾದ್ಯಂತ ಸಂಕಷ್ಟ ಅನುಭವಿಸುತ್ತಿದ್ದು, ಜನರನ್ನು ತಾಯಿ ರೇಣುಕಾಯಲ್ಲಮ್ಮ ಕಾಪಾಡಬೇಕು. ಗ್ರಾಮದ ಜನರು ಹೊಂದಾಣಿಕೆ, ಪ್ರೀತಿ ವಿಶ್ವಾಸದಿಂದ ಬದುಕಬೇಕು. ಮಕ್ಕಳು ವಿದ್ಯಾವಂತರಾಗುವ ಜತೆಗೆ ಸಂಸ್ಕಾರವಂತರಾಗಬೇಕು ಎಂದರು. ಅರ್ಜುನಬೆಟ್ಟಹಳ್ಳಿಯಲ್ಲಿ ಸನಾತನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಶ್ರೀ ಶ್ರೀನಿವಾಸಸ್ವಾಮಿಜಿ ಗ್ರಾಮದ ಜನರಿಗೆ ಅವಶ್ಯಕವಿರುವ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮನವಿ ಮಾಡಿದ್ದು, ಕೂಡಲೇ ಸೂಕ್ತ ಕ್ರಮವಹಿಸಲಾಗುವುದು ಎಂದರು.
ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್.ಮಲ್ಲಯ್ಯ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ಗ್ರಾಮದ ಪ್ರತಿಯೊಬ್ಬರೂ ಪಕ್ಷಭೇದ ಮರೆತು ಒಗ್ಗಟಾಗಿ ಸಹಕಾರ ನೀಡಿದ್ದಾರೆ. ಸುಮಾರು ಹತ್ತಾರು ವರ್ಷಗಳ ಕಾಲದಿಂದ ಹಿರಿಯರು ಪೂಜೆ ನಡೆಸಿಕೊಂಡು ಬರುತ್ತಿದ್ದ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದುದ್ದನ್ನು ಕಂಡು 3 ತಿಂಗಳಾವಧಿಯಲ್ಲಿ ಉತ್ತಮ ನೂತನ ದೇವಾಲಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಮಹಾಗಣಪತಿ ಹೋಮ, ಗಂಗೆಪೂಜೆ, ಗೋಪೂಜೆ, ಗುರುವಂದನೆ, ಸಭಾವಂದನೆ, ದೇವಾನಾಂಧಿ, ಮೃತ್ಸಗ್ರಹಣ, ಜಮಧಗ್ನಿಹೋಮ, ನವಗ್ರಹಹೋಮ, ದುರ್ಗಾಹೋಮ, ಚಂಡಿಕಾಹೋಮ, ಶ್ರೀ ರೇಣುಕಾಯಲ್ಲಮ್ಮ ವಿಶೇಷಹೋಮ, ಕಳಶಾಭಿಷೇಕ ನೆರವೇರಿಸಲಾಯಿತು.
ಅರ್ಜುನಬೆಟ್ಟಹಳ್ಳಿ ಪರಿಪೂರ್ಣಚಾರಿ ಟಬಲ್ ಟ್ರಸ್ಟ್ ಸಂಸ್ಥಾಪಕ ಶ್ರೀ ಶ್ರೀನಿವಾಸಸ್ವಾಮೀಜಿ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ ಜಿ.ಮರಿಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ, ಮಾಜಿ ಸಚಿವ ಅಂಜನಾಮೂರ್ತಿ, ನೆ.ಯೋ.ಪ್ರಾಧಿಕಾರ ಸದಸ್ಯ ರಮೇಶ್, ಮಖಂಡ ಭವಾನಿಶಂಕರ್‌ಮಂಜುನಾಥ್ ಮತ್ತಿತತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಗೊಲ್ಲಹಳ್ಳಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆ ಮಹಾಲಕ್ಷ್ಮೀಮಂಜುನಾಥ್, ಉಪಾಧ್ಯಕ್ಷ ಸತೀಶ್‌ಕುಮಾರ್, ಸದಸ್ಯ ಎಚ್.ಡಿ.ಹರ್ಷ, ಜಿ.ಸಿದ್ಧಗಂಗಯ್ಯ, ಜಗದಾಂಭ, ಮಂಜುಳ, ಮುಖಂಡ ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.