

ಶೃಂಗೇರಿ:ಯಾವುದೇ ಕೆಲಸ ನಿರ್ವಹಿಸುವಾಗ ನಮ್ಮಲ್ಲಿ ಪರಿಶುದ್ಧವಾದ ಮನಸ್ಸು ಇರಬೇಕು. ಹಾಗೆಯೇ ಶುದ್ಧವಾದ ಸಂಕಲ್ಪ ಇರಬೇಕು. ಉತ್ತಮ ಕಾರ್ಯಕ್ಕೆ ಭಗವಂತನ ಅನುಗ್ರಹ ಸದಾ ಇರುತ್ತದೆ ಎಂದು ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.
ಸೋಮವಾರ ಗುರುನಿವಾಸದ ಶ್ರೀಭಾರತೀತೀರ್ಥ ನಗರದಲ್ಲಿ ಮಾತನಾಡಿ, ಸತ್ಕಾರ್ಯ ಮಾಡುವ ವ್ಯಕ್ತಿಗೆ ಭಗವಂತನ ಅನುಗ್ರಹ ಸದಾ ಇರುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಿದೆ. ಲೌಕಿಕ ಜೀವನದಲ್ಲಿ ಮಾಡುವ ಯಾವುದೇ ಕೆಲಸ ಯಶಸ್ಸು ಕಂಡಾಗ ಎಲ್ಲವನ್ನೂ ನಾನು ಮಾಡಿದ್ದು ಎಂಬ ಅಹಂಭಾವಿಕೆ ಇರಬಾರದು ಎಂದರು.
ಐದು ಬೆರಳಿನಲ್ಲಿ ಹೆಬ್ಬೆರಳಿಗೆ ಬಲು ಸಾಮರ್ಥ್ಯವಿದ್ದರೂ ಭಗವಂತನಿಗೆ ಹಾಗೂ ಹಿರಿಯರಿಗೆ ನಮಸ್ಕಾರ ಸಲ್ಲಿಸುವಾಗ ಕಿರುಬೆರಳು ಮುಂದೆ ಇರುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದಂತಹ ಸಾಮರ್ಥ್ಯ ಇರುತ್ತದೆ. ಈ ಸಾಮರ್ಥ್ಯ ಸ್ತೋತ್ರತ್ರಿವೇಣಿ ಸಮರ್ಪಣಾ ಸಮಾರಂಭದಲ್ಲಿ ಆನಾವರಣಗೊಂಡಿದೆ. ಇದು ನಮ್ಮ ಪೀಠ, ಇದು ನಮ್ಮ ಕಾರ್ಯಕ್ರಮ ಎಂದು ಪ್ರತಿಯೊಬ್ಬರು ಕರ್ತವ್ಯ ಬದ್ಧರಾಗಿ ಸೇವೆ ಸಲ್ಲಿಸಿದ್ದಾರೆ.ಕಾರ್ಯಕ್ರಮದ ಯಶಸ್ಸು ಹಿಂದೆ ಸ್ವಯಂ ಸೇವಕರ ಪ್ರಾಮಾಣಿಕತೆ, ಗುರುಭಕ್ತಿ ಅನುಪಮವಾಗಿದೆ. ಪ್ರತಿಯೊಬ್ಬರು ಭಗವತ್ ಚಿಂತನೆ ಮಾಡಬೇಕು. ಶ್ರದ್ಧಾಭಕ್ತಿಯಿಂದ ಜಗದ್ಗುರುಗಳು ನೀಡಿದ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ಸುಮಾರು 2500ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.