ರಾಮಚಂದ್ರಾಪುರ ಮಠದಲ್ಲಿ ಗೋದೀಪ-ಗೋಪೂಜೆ; ಗೋಸಂರಕ್ಷಣೆ, ಲೋಕಕಲ್ಯಾಣಕ್ಕಾಗಿ ಕಾರ್ಯಕ್ರಮ

gopuje
Published on

ಬೆಂಗಳೂರು: ಗೋಸಂರಕ್ಷಣೆ ಹಾಗೂ ಲೋಕಕಲ್ಯಾಣದ ಮಹಾಸಂಕಲ್ಪದೊಂದಿಗೆ ದೀಪಾವಳಿಯ ಪರ್ವದಲ್ಲಿ ವಿಶ್ವಜನನಿಯ ವಿಶಿಷ್ಟ ಪೂಜಾ ಕಾರ್ಯಕ್ರಮ ‘ಗೋದೀಪ - ದೀಪಾವಳೀ ವಿಶೇಷ ಗೋಪೂಜೆ’ಯು ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ರಾಮಾಶ್ರಮದಲ್ಲಿ ನಾಳೆ (ಬುಧವಾರ) ಹಮ್ಮಿಕೊಳ್ಳಲಾಗಿದೆ.

ಸಂಜೆ 5 ಗಂಟೆಯಿಂದ ನಡೆಯಲಿರುವ ಗೋಪೂಜೆಗೆ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಚಾಲನೆ ನೀಡಲಿದ್ದು, ಗೋಪೂಜೆಯ ನಂತರ ಗೋಸಂದೇಶವನ್ನು ನೀಡಲಿದ್ದಾರೆ.

ಆಹ್ವಾನಿತ ಗಣ್ಯ-ಮಾನ್ಯ ದಂಪತಿಗಳಿಂದ ಏಕಕಾಲಕ್ಕೆ ವಿಶೇಷರೀತಿಯಲ್ಲಿ ಸಾಲಂಕೃತ ಗೋವುಗಳಿಗೆ ಪೂಜೆ ನಡೆಯಲಿದ್ದು, ಗೋಮಾತೆಯ ಅನುಗ್ರಹ ಪ್ರಾಪ್ತಿಗಾಗಿ ಗೋಸೂಕ್ತ ಪಾರಾಯಣ, ಗೋಸೂಕ್ತ ಹವನ ನಡೆಯಲಿದೆ. ಶಿವಶ್ರೀ ಸ್ಕಂದಪ್ರಸಾದ್ ಹಾಗೂ ತಂಡದವರಿಂದ ’ಗೋ ಗಾನಾಮೃತ’ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ನೂರಾರು ಮಾತೆಯರಿಂದ ಗೋಮಯ ಹಣತೆಯಲ್ಲಿ ಗೋ ಆರತಿ ನಡೆಯಲಿದ್ದು, ಬೆಳಗಿನಿಂದಲೇ ಸಾರ್ವಜನಿಕರಿಗೆ ಸಾಮೂಹಿಕ ಗೋಪೂಜೆಯನ್ನು ನಡೆಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ಪಾರಂಪರಿಕ ರೀತಿಯಲ್ಲಿ ಗೋಪೂಜೆ ನಡೆಯಲಿದೆ.

ರಾಮಚಂದ್ರಾಪುರ ಮಠವು ರಾಷ್ಟ್ರಮಟ್ಟದಲ್ಲಿ ಹತ್ತಾರು ಗೋಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದು, ಇದೀಗ ದೀಪಾವಳಿಯಂದು ವಿಶೇಷವಾಗಿ ಗೋಪೂಜೆಯ ಮೂಲಕ ಗೋಸಂರಕ್ಷಣೆಯ ಸಂದೇಶ ಸಾರಲು ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ, ವೈದ್ಯ ಸಾಹಿತಿ ಡಾ.ನಾ.ಸೋಮೇಶ್ವರ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಶಿವಶ್ರೀ ಸ್ಕಂದಪ್ರಸಾದ ತಂಡದವರಿಂದ ಗೋ ಗಾನಾಮೃತ ಸಂಗೀತ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net