ರೋಗಗಳನ್ನು ನಿವಾರಿಸುವ ದೇವಿ

ಮದ್ದೂರು ತಾಲೂಕಿನ ನಿಢಘಟ್ಟ ಗ್ರಾಮದಲ್ಲಿರುವ ಮಾರಮ್ಮ ದೇಗುಲದ ಹೊರ ನೋಟ.
ಮದ್ದೂರು ತಾಲೂಕಿನ ನಿಢಘಟ್ಟ ಗ್ರಾಮದಲ್ಲಿರುವ ಮಾರಮ್ಮ ದೇಗುಲದ ಹೊರ ನೋಟ.
Published on

ಮದ್ದೂರು: ತಾಲೂಕಿನ ನಿಡಘಟ್ಟ ಗ್ರಾಮದಲ್ಲಿರುವ ಮಾರಮ್ಮನ ದೇಗುಲಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ಹಲವಾರು ವಿಶೇಷತೆಗಳ ಮೂಲಕ ಭಕ್ತರ ಗಮನ ಸೆಳೆದಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ನಿಡಘಟ್ಟ ಗ್ರಾಮದಲ್ಲಿ 400 ವರ್ಷಗಳ ಹಿಂದೆ ಇದ್ದಕ್ಕಿಂದಂತೆ ಗ್ರಾಮದಲ್ಲಿ ದಡಾರ, ವಾಂತಿ, ಭೇದಿ ಸೇರಿದಂತೆ ಇತರ ರೋಗ ಗ್ರಾಮಸ್ಥರನ್ನು ಬಾಧಿಸ ತೊಡಗಿತು. ಇದರಿಂದ ಗ್ರಾಮಸ್ಥರು ರೋಸಿ ಹೋಗಿ ಏಕೆ ಹೀಗೆ ಆಗುತ್ತಿದೆ ಎಂದು ಹಿರಿಯನ್ನು ವಿಚಾರಿಸಿದಾಗ, ಗ್ರಾಮದಲ್ಲಿ ಮಾರಮ್ಮ ದೇಗುಲ ನಿರ್ಮಾಣ ಮಾಡಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ ಯಾವುದೇ ರೋಗ ಬರುವುದಿಲ್ಲ ಎಂದು ಸಲಹೆ ನೀಡಿದರು.

ಆಗ ಗ್ರಾಮಸ್ಥರೆಲ್ಲ ಸೇರಿ ಒಂದು ಅಡಿ ಉದ್ದದಲ್ಲಿ ಅಂಕೋಲೆ ಮರದಲ್ಲಿ ಮಾರಮ್ಮ ದೇವಿ ಮೂರ್ತಿಯನ್ನು ಸುಂದರವಾಗಿ ನಿರ್ಮಾಣ ಮಾಡಿದರು. ಜತೆಗೆ ದೇವಾಲಯ ಕಟ್ಟಿ ದೇವಿ ಪ್ರತಿಷ್ಠಾಪಿಸಿದರು. ಜತೆಗೆ ಗ್ರಾಮದ ಹೆಬ್ಬಾಗಿಲಿಗೆ ಪ್ರಾಣಿ ಬಲಿ ನೀಡಿ ನಂತರ ಮಾರಮ್ಮನಿಗೆ ಪೂಜೆ ಸಲ್ಲಿಸಲಾಯಿತು. ಅಂದಿನಿಂದ ಇಂದಿನವರೆಗೆ ರೋಗ ಮರುಕಳುಹಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ನಂತರ ದಿನಗಳಲ್ಲಿ ಮರದ ಮೂರ್ತಿಯನ್ನು ಹೂವು, ಅರಿಶಿಣ, ಕುಂಕುಮ, ಚಿನ್ನ ಮತ್ತು ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಲು ಪ್ರಾರಂಭಿಸಲಾಯಿತು. ಮರದಿಂದ ನಿರ್ಮಾಣ ಮಾಡಿರುವ ಮೂಲ ವಿಗ್ರಹ ಕೆಳ ಭಾಗದಲ್ಲಿರುವುದನ್ನು ಈಗಲೂ ನೋಡಬಹುದು.

ಮಕ್ಕಳ ಪಾಲಿನ ಆರಾಧ್ಯ ದೈವ: ಮಕ್ಕಳಿಗೆ ಜ್ವರ, ಅಮ್ಮ ಸೇರಿದಂತೆ ಯಾವುದೇ ರೀತಿಯ ರೋಗಗಳು ಬಂದರೂ ಮೊದಲು ಮಾರಮ್ಮ ದೇವಿಗೆ ಮಂಗಳವಾರ ಅಥವಾ ಶುಕ್ರವಾರ ತಂಪು ಮಾಡುವುದು ವಾಡಿಕೆ. ಚೊಂಬಿನಲ್ಲಿ ನೀರು ತಂದು, ಬೇವಿನ ಸೊಪ್ಪು, ಎಳನೀರು, ಮೊಸರನ್ನ, ಅರಿಶಿಣ, ಕುಂಕಮವನ್ನು ದೇವಿಗೆ ಅರ್ಪಣೆ ಮಾಡಿ ತಂಬಿಟ್ಟಿನಾರತಿ ಮಾಡಿದರೆ ರೋಗಗಳು ಗುಣಮುಖವಾಗುತ್ತದೆ ಎಂಬುವುದು ಭಕ್ತರ ನಂಬಿಕೆ. ದೇವಸ್ಥಾನಕ್ಕೆ ಬಂದು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ ಕಂಕಣ ಭಾಗ್ಯ, ಸಂತಾನ ಭಾಗ್ಯ, ಉದ್ಯೋಗ ಸೇರಿದಂತೆ ಇಷ್ಟಾರ್ಥಗಳು ಈಡೇರುವುದರ ಜತೆಗೆ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ನೆಲಸುತ್ತದೆ ಎಂಬುದು ಭಕ್ತರ ವಿಶ್ವಾಸ. ಮಾರಮ್ಮ ಶಾಂತ ಸ್ವಭಾವ ದೇವಿಯಾಗಿದ್ದು, ಶುದ್ಧ ಸಸ್ಯಾಹಾರಿ. ಎಳನೀರು, ಮೊಸರನ್ನ, ಬೇವಿನಸೊಪ್ಪು, ಭಾಗಿನ, ಅರಿಶಿಣ, ಕುಂಕುಮ ಅರ್ಪಣೆ ಮಾಡಿದರೆ ದೇವಿ ಒಲಿಯತ್ತಾಳೆ ಎಂಬುವುದು ಭಕ್ತರ ನಂಬಿಕೆ.

ವಿಶೇಷ ಧಾರ್ಮಿಕ ಕಾರ್ಯಕ್ರಮ: ಮಾರಮ್ಮ ದೇಗುಲದಲ್ಲಿ ಮಾರ್ಚ್‌ಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಪ್ರತಿ ಮಂಗಳವಾರ, ಶುಕ್ರವಾರ ವಿಶೇಷ ಧಾರ್ಮಿಕ ಕೈಂಕರ್ಯ ನಡೆಯುತ್ತದೆ. ದೀಪಾವಳಿ ಸಂದರ್ಭದಲ್ಲಿ ದೀಪೋತ್ಸವ, ಭಕ್ತರಿಗೆ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ನೆರವೇರಲಿದೆ. ವರ್ಷಕ್ಕೆ ನಾಲ್ಕರಿಂದ ಐದು ಬಾರಿ ಮಂಗಳವಾರದಂದು ಗ್ರಾಮಕ್ಕೆ ಯಾವುದೇ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಮಾರಮ್ಮ ದೇವಿಗೆ ತಂಪೆರೆಯುತ್ತಾರೆ. ಈ ವೇಳೆ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಜತೆಗೆ ಪ್ರತಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತದೆ.

ಜಾತ್ರಾ ಮಹೋತ್ಸವ: ಮಾ.18 ಮತ್ತು 19 ರಂದು ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. 18 ರಂದು ಕೊಂಡ ಬಂಡಿ ಉತ್ಸವ, ರಾತ್ರಿ ಕೊಂಡಕ್ಕೆ ಅಗ್ನಿ ಸ್ಪರ್ಶ, ಹೋಮ-ಹವನ, ದೇವರಿಗೆ ತಂಬಿಟ್ಟಿನಾರತಿ, ಪಟಾಕಿ ಸಿಡಿಸುವುದು ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. 19 ರಂದು ಬೆಳಗ್ಗೆ 5 ಗಂಟೆಗೆ ಮಾರಮ್ಮ ದೇವಸ್ಥಾನ ಆವರಣದಲ್ಲಿ ಭಕ್ತರ ಸಮ್ಮುಖದಲ್ಲಿ ಮಾರಮ್ಮನ ಕೊಂಡೋತ್ಸವ ಅದ್ದೂರಿಯಾಗಿ ನಡೆಯಲಿದೆ. ಸಂಜೆ ಕರಗ ಉತ್ಸವ, ಧೂಪದ ಕರಗ, ಹೂವಿನ ಕರಗ ಹಾಗೂ ದೇವರ ಪೂಜಾ ಪಟವನ್ನು ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಮಾರ್ಗ: ಮದ್ದೂರಿನಿಂದ ಹೋಗುವವರು ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ 6 ಕಿ.ಮೀ., ಚನ್ನಪಟ್ಟಣದಿಂದ ಬರುವವರು ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ 13 ಕಿ.ಮೀ. ಕ್ರಮಿಸಬೇಕು. ಬಳಿಕ ಕೆಸ್ತೂರಿನಿಂದ 10 ಕಿ.ಮೀ. ಕ್ರಮಿಸಿದರೆ ದೇಗುಲ ಸಿಗಲಿದೆ.

ನಿಡಘಟ್ಟ ಗ್ರಾಮದಲ್ಲಿರುವ ಮಾರಮ್ಮ ದೇವರಿಗೆ ಸುಮಾರು 400 ವರ್ಷಗಳ ಇತಿಹಾಸವಿದೆ. ಮಾರಮ್ಮನಿಗೆ ನಿರಂತರವಾಗಿ ಪೂಜೆ ಮಾಡುವುದರಿಂದ ಗ್ರಾಮದಲ್ಲಿ ರೋಗ ಕಾಣಿಸಿಕೊಳ್ಳುವುದಿಲ್ಲ. ಮಾರಮ್ಮನ ದಯೆಯಿಂದ ಎಲ್ಲರೂ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ.

ಎ.ನಾರಾಯಣಸ್ವಾಮಿ ಭಕ್ತ, ನಿಡಘಟ್ಟ

ಮಾರಮ್ಮ ದೇವಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಕೇಳಿದ್ದನ್ನು ಕರುಣಿಸುತ್ತಾಳೆ ಎಂಬುವುದಕ್ಕೆ ಹಲವಾರು ನಿದರ್ಶನ ನಮ್ಮ ಕಣ್ಮುಂದೆ ಇದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ನಾನು ಮತ್ತು ನನ್ನ ಕುಟುಂಬ ನಿರಂತರವಾಗಿ ದೇವಿ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಎನ್.ಎಂ.ಪ್ರಕಾಶ್ ಗ್ರಾಪಂ ಮಾಜಿ ಅಧ್ಯಕ್ಷ, ನಿಡಘಟ್ಟ

ಮಾರಮ್ಮ ದೇವಿ ದುಷ್ಟರನ್ನು ಸಂಹರಿಸಿ ಶಿಷ್ಟರಿಗೆ ರಕ್ಷಣೆ ನೀಡುತ್ತಾಳೆ. ಆದ್ದರಿಂದ ಮಾರಮ್ಮ ದೇವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಮಾರಮ್ಮ ದೇವಿಯನ್ನು ನಂಬಿದರೆ ಜೀವನದಲ್ಲಿ ಕಷ್ಟಗಳು ಮಂಜಿನಂತೆ ಕರಗಿ, ಸುಖ, ಶಾಂತಿ, ನೆಮ್ಮದಿ ನೆಲಸುತ್ತದೆ.

ಎನ್.ಸಿ.ಕುಮಾರ್ ದೇಗುಲದ ಪ್ರಧಾನ ಅರ್ಚಕ ನಿಡಘಟ್ಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net