

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ದೇವರ ಉತ್ಸವವು ಏ. 28 ರಿಂದ ಆರಂಭಗೊಂಡಿದ್ದು, ಮೇ 13 ರ ವರೆಗೆ ನಡೆಯಲಿದೆ.
ಉತ್ಸವ ಅಂಗವಾಗಿ ಪ್ರತಿದಿನ ವಿಶೇಷ ಕಾರ್ಯಕ್ರಮಗಳ ಜತೆಗೆ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ, ಮಹಾಪೂಜೆ, ಷೋಡಷೋಪಚಾರ, ನೈವೇದ್ಯ, ಹಸ್ತೋದಕ, ತೀರ್ಥ ಪ್ರಸಾದ, ಸಂಜೆ ಮಂತ್ರಪುಷ್ಪ, ಅಷ್ಠಾವಧಾನ ಸೇವೆ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ ಹಾಗೂ ಭಜನೆ ಜರುಗಲಿವೆ.
ಪ್ರತಿಪದೆಯಿಂದ ದಶಮಿಯವರೆಗೆ ನರಹರಿ ಆಚಾರ್ಯರಿಂದ ಭೀಮನ ಧರ್ಮ ನಿರ್ಣಯ, ಸಮೀರಣಾಚಾರ್ಯ ಪಾಂಘ್ರಿ ಅವರಿಂದ ಕಪಿಲೋಪಾಖ್ಯಾನ ಪುರಾಣ, ಸಂಜೀವಾಚಾರ್ಯ ಬುರ್ಲಿ ಅವರಿಂದ ಮಾರ್ಕಂಡೆಯ ಪುರಾಣ, ಶ್ರೀನಿಧಿ ಆಚಾರ್ಯ ಬಲ್ಲರವಾಡ ಅವರಿಂದ ಸಪ್ತಮಸ್ಕಂದ (ಭಾಗವತ) ಹಾಗೂ ಬಿಂದಾಚಾರ್ಯ ನಾಗಸಂಪಗಿ ಅವರಿಂದ ಮೃತ್ಯುಂಜಯ ಮಹಿಮೆ ಕುರಿತು ಪ್ರವಚನಗಳು ನಡೆಯಲಿವೆ.
ಮೇ 10 ರಂದು ನರಸಿಂಹ ಜಯಂತಿ ಅಂಗವಾಗಿ ಶ್ರೀಹರಿಗೆ ಕನಕಾಭಿಷೇಕ, ಸಹಸ್ರ ಶಂಖ ಕ್ಷೀರಾಭಿಷೇಕ, ತುಲಾಭಾರ, ಹೋಮ, ಹವನಗಳು ಜರುಗಲಿವೆ. ಮೇ 12 ರಂದು ರಥಾಂಗ ಹೋಮ, ಪ್ರಧಾನ ರಥೋತ್ಸವ, ಮೇ 13 ರಂದು ಬೆಳಗ್ಗೆ ಹೋಮ ಹವನ, ಲಲಿತಾ ಉತ್ಸವ, ಮಹನೀಯರಿಗೆ ಸನ್ಮಾನ, ಗೋಪಾಲ ಕಾವಲಿ, ಅವಕೃತ ಸ್ನಾನ, ವೇದ ಘೋಷದೊಂದಿಗೆ ನರಸಿಂಹದೇವರ ಪುರ ಪ್ರವೇಶದೊಂದಿಗೆ ಉತ್ಸವ ಸಮಾಪ್ತಿಯಾಗಲಿದೆ ಎಂದು ದೇವಸ್ಥಾನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.