

ಮುದಗಲ್: ಸಮೀಪದ ತೊಂಡಿಹಾಳ ಗ್ರಾಮದ ಆರಾಧ್ಯ ದೈವ ಹುಲಿಗೆಮ್ಮ ದೇವಿ ಜಾತ್ರೋತ್ಸವ ನಿಮಿತ್ತ ಭಾನುವಾರ ವಿಜೃಂಭಣೆಯಿಂದ ಮಹಾರಥೋತ್ಸವ ಜರುಗಿತು.
ಮೂರು ದಿನಗಳ ಜಾತ್ರೋತ್ಸವದಲ್ಲಿ ದೇವಿಗೆ ಉಡಿ ತುಂಬುವುದು, ದೀರ್ಘದಂಡ ನಮಸ್ಕಾರ ಸೇರಿದಂತೆ ವಿವಿಧ ಬಗೆಯ ಮುಡುಪು ಸಮರ್ಪಣೆ ನಡೆಯಿತು. ಪ್ರತಿ ವರ್ಷದಂತೆ ಪಲ್ಲಕ್ಕಿ ಸೇವೆ, ದೇವಿ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಧಾರ್ಮಿಕ ಪೂಜೆ ನೆರವೇರಿಸಲಾಯಿತು.
ಭಾನುವಾರ ಸಂಜೆ ಮಹಾರಥೋತ್ಸವದಲ್ಲಿ ಜಿಲ್ಲೆ ಮಾತ್ರವಲ್ಲದೆ ವಿಜಯಪುರ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆಯಿಂದ ಅಸಂಖ್ಯಾತ ಭಕ್ತರು ಪಾಲ್ಗೊಂಡು ಪುನೀತರಾದರು. ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ತ್ ಒದಗಿಸಲಾಗಿತ್ತು.