ಯಾವಗಲ್ಲ ಗ್ರಾಮದಲ್ಲಿ ದೇವಿ ಜಾತ್ರೆ

belavanike
Published on

ಬೆಳವಣಿಕಿ(ರೋಣ ತಾ.): ಸಮೀಪದ ಯಾವಗಲ್ಲ ಗ್ರಾಮದಲ್ಲಿ ಗ್ರಾಮದೇವಿಯರ ಜಾತ್ರೆ ಮೇ 31ರಿಂದ 5 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.

31ರಂದು ಮೆರವಣಿಗೆ ಮೂಲಕ ಗ್ರಾಮದೇವಿಯರ ಮೂರ್ತಿಗಳ ಪುರಪ್ರವೇಶ, ಚೌತ ಮನೆಯಲ್ಲಿ ಕೂಡಿಸುವುದು. ಜೂ. 1 ರಂದು ಚೌತಮನೆಯಿಂದ ದೇಗುಲಕ್ಕೆ ದೇವಿಯರ ಮೂರ್ತಿಗಳ ಆಗಮನ, 2ರಂದು ಹೊನ್ನಾಟ ಮತ್ತು ವಿವಿಧ ಹೋಮ ನೆರವೇರಲಿವೆ. 3ರಂದು ವಿವಿಧ ಪೂಜೆ ನಡೆಯಲಿವೆ. 4ರಂದು ಬ್ರಾಹ್ಮಿ ಮುಹೂರ್ತದಲ್ಲಿ ದೇವಿ ಗರ್ಭಗುಡಿಯ ಪೀಠದಲ್ಲಿ ಆಸೀನರಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಧರ್ಮಸಭೆ, ಸಂಜೆ 5.ಕ್ಕೆ ಗ್ರಾಮದ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ, 7 ಗಂಟೆಗೆ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಟ್ಟು ನಿಟ್ಟಿನ ಆಚರಣೆ

ಜಾತ್ರೆ ನಡೆಯುವ 5 ದಿನಗಳ ಕಾಲ ಗ್ರಾಮದಲ್ಲಿ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಯಾರ ಮನೆಯಲ್ಲೂ ಅಡುಗೆ ಮಾಡುವಂತಿಲ್ಲ. ಗ್ರಾಮದೇವಿ ಕಮಿಟಿ ವತಿಯಿಂದ 5 ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. 5 ದಿನ ಗ್ರಾಮದಲ್ಲಿ ಯಾರು ಚಪ್ಪಲಿ ಧರಿಸುವಂತಿಲ್ಲ. ವೈಯಕ್ತಿಕ ಕೆಲಸಗಳಿಗೆ ಬೇರೆ ಊರುಗಳಿಗೆ ಹೋಗುವ ಗ್ರಾಮಸ್ಥರು ಅಲ್ಲಿ ವಾಸ್ತವ್ಯ ಮಾಡುವಂತಿಲ್ಲ. ಕಡ್ಡಾಯವಾಗಿ ಗ್ರಾಮಕ್ಕೆ ಮರಳಬೇಕು ಎಂಬಿತ್ಯಾದಿಗಳನ್ನು ಕಟ್ಟುನಿಟ್ಟಾಗಿ ಆಚರಿಸಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ರೋಣದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net