

ಸೊರಬ: ತಾಲೂಕಿನ ಜಡೆ ಗ್ರಾಮದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ಶ್ರೀ ದುರ್ಗಾ ದೇವಿಯ ಪ್ರತಿಷ್ಠಾಪನಾ ಮೆರವಣಿಗೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಜಡೆ ಸಂಸ್ಥಾನ ಮಠದ ಆವರಣದಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ಕುಂಭ ಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯ ಮೇಳಗಳೊಂದಿಗೆ ಅರಳಿಕಟ್ಟೆ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಶ್ರೀ ದೇವಿಯನ್ನು ರಾಜಬೀದಿ ಉತ್ಸವದಲ್ಲಿ ಕರೆತಂದು ಕಟ್ಟೆ ಸರ್ಕಲ್‌ನ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಮೆರವಣಿಗೆಗೆ ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಮಠದ ಉತ್ತರಾಧಿಕಾರಿ ಶ್ರೀ ರುದ್ರ ದೇವರು ಸಹಕರಿಸಿದರು. ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಶ್ರೀ ದೇವಿಯ ಪ್ರತಿಷ್ಠಾಪನಾ ಪೂಜೆ ಸಲ್ಲಿಸಿದರು. ಸಂತೋಷ ಶಾಸ್ತ್ರಿಗಳು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.
ಜಡೆ ಗ್ರಾಪಂ ಅಧ್ಯಕ್ಷ ಅಮಿತ್ ಗೌಡ ಮಾತನಾಡಿ, ಗ್ರಾಮದಲ್ಲಿ ಪ್ರಥಮ ಬಾರಿಗೆ ನವರಾತ್ರಿ ಉತ್ಸವವನ್ನು ಜಡೆ ಮಠದ ಶ್ರೀಗಳ ಆಶೀರ್ವಾದದೊಂದಿಗೆ ಹಾಗೂ ಗ್ರಾಮದ ಸರ್ವ ಸಮುದಾಯವರ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ, ನಾಡು ಸಮೃದ್ಧವಾಗಿರಲಿ ಎಂದು ಪ್ರಾರ್ಥಿಸಿ ಒಂಬತ್ತು ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು. ಅ.22ರಂದು ದುರ್ಗಾ ಹೋಮ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ನಿತ್ಯ ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅ.16ರಂದು ಸ್ನೇಹ ಜೀವಿ ಮೆಲೋಡಿಸ್ ಅವರಿಂದ ರಸಮಂಜರಿ, 17ರಂದು ಎನ್.ಜೆ. ಮಂಜುನಾಥ ಹಡಗಲಿ ಬಳ್ಳಾರಿ ಅವರಿಂದ ನಗೆಹಬ್ಬ ಮತ್ತು ಗಾನಸುಧೆ, 18ರಂದು ಸೊರಬದ ಪ್ರವೀಣ ಭಂಡಾರಿ ಮತ್ತು ಶಿಷ್ಯ ವೃಂದದಿಂದ ವಚನ ಗಾಯನ, 19ರಂದು ಶ್ರೀ ಪಂಚಾಕ್ಷರ ಗಾವಾಯಿಗಳ ನಾಟ್ಯ ಸಂಘದಿಂದ ಮುತ್ತೈದೆಯಾಗಿ ಹುಟ್ಟಿ ಬಾ ನಾಟ್ಯ ಪ್ರದರ್ಶನ, 20ರಂದು ಶ್ರೀ ರೇಣುಕಾ ಯಲ್ಲಮ್ಮ ದೇವಿ ಎಂಬ ಪೌರಾಣಿಕ ನಾಟಕ ಪ್ರದರ್ಶನ, 21ರಂದು ಏಕಲವ್ಯ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ, 22-23ರಂದು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, 24ರಂದು ಸಂಜೆ 4ಕ್ಕೆ ಶ್ರೀ ಸಿದ್ಧವೃಷಬೇಂದ್ರ ಶಿವಯೋಗಿಗಳ ಉತ್ಸವ ಮೂರ್ತಿಯೊಂದಿಗೆ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮೆರವಣಿಗೆಯಲ್ಲಿ ದಸರಾ ಉತ್ಸವ ಸಮಿತಿಯ ವೀರೇಂದ್ರ ಪಾಟೀಲ್, ಕೇಶವ ರಾಯ್ಕರ್, ರುದ್ರಗೌಡ ಕಮರೂರು, ರವಿ ಮೂಡಿ, ಮಹೇಂದ್ರ ಗೌಡ, ವಾಗೀಶ್ ಹಿರೇಮಠ, ಗಂಗಾಧರ ಶೇಟ್, ರಂಗನಾಥ ಶಿವಾನಿ, ಮುತ್ತುಗೌಡ, ರಾಜು ಕಲಾಲ್, ಗಂಗಾಧರ ಚಗಟೂರು, ಗುಡ್ಡಪ್ಪ ಮಡಿವಾಳ, ಪ್ರಶಾಂತ ತ್ಯಾವಗೋಡು, ಸುರೇಶ್ ಅರಳಿಕಟ್ಟಿ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.