ಭಕ್ತರ ಇಷ್ಟಾರ್ಥ ಈಡೇರಿಡುವ ದ್ಯಾಮವ್ವದೇವಿ

Dyamavva Devi akkialur
Published on

ಅಕ್ಕಿಆಲೂರ: ಪವಾಡಗಳಿಂದ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿ ಈ ಭಾಗದ ಮನೆಮನಗಳಲ್ಲಿ ನೆಲೆಸಿರುವ ಹಾನಗಲ್ಲ ತಾಲೂಕಿನ ಕೂಸನೂರ ಗ್ರಾಮದ ಶಕ್ತಿದೇವತೆ ಗ್ರಾಮದೇವಿ ಶ್ರೀ ದ್ಯಾಮವ್ವದೇವಿಯ ನೂತನ ಶಿಲಾಕಟ್ಟಡ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭ ಫೆ. 3ರಿಂದ 7ರವರೆಗೆ ಅದ್ದೂರಿಯಾಗಿ ಆರಂಭಗೊಳ್ಳಲಿದೆ.

ಶಿವಮೊಗ್ಗ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡು ಮಲೆನಾಡ ಸಿರಿಯಲ್ಲಿರುವ ಕೂಸನೂರ ಗ್ರಾಮದಲ್ಲಿ ಸುಮಾರು ಶತಮಾನಗಳಷ್ಟು ಪುರಾತನವಾಗಿರುವ ಗ್ರಾಮದೇವಿಯನ್ನು ಜಾತಿ, ಧರ್ಮಗಳನ್ನು ಮೀರಿ ಅಸಂಖ್ಯಾತ ಭಕ್ತಗಣ ಆರಾಧಿಸುತ್ತದೆ. ಶಿರಸಿ ಮಾರಿಕಾಂಬಾ ದೇವಿಯ ನಂತರ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕೂಸನೂರ ಗ್ರಾಮದೇವಿ ಎಂದರೆ ಜನತೆಯಲ್ಲಿ ಭಕ್ತಿ, ಶ್ರದ್ಧೆ, ನಂಬಿಕೆ ನೆಲೆಯೂರುತ್ತದೆ. ಪ್ರತಿ ಹುಣ್ಣಿಮೆ, ಅಮಾವಾಸ್ಯೆ ದಿನ ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತರು ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸುತ್ತಾರೆ. ಜನತೆಯ ಕಷ್ಟಕಾರ್ಪಣ್ಯ ನಿವಾರಿಸುವ ಮೂಲಕ ಕೂಸನೂರ ಗ್ರಾಮವನ್ನು ಧಾರ್ವಿುಕ ನೆಲೆಬೀಡಾಗಿಸಿದ ಗ್ರಾಮದೇವಿಯ ಬಳಿ ಕಷ್ಟ ಹೇಳಿಕೊಂಡು ಬಂದವರಿಗೆ ಎಂದಿಗೂ ಕೈಬಿಟ್ಟಿಲ್ಲ ಎಂಬ ನಂಬಿಕೆ ಈ ಭಾಗದಲ್ಲಿದೆ. ಕೂಸನೂರ ಗ್ರಾಮ ಹುಟ್ಟಿದಾಗಲಿಂದಲೂ ನೆಲೆಸಿರುವ ಗ್ರಾಮದೇವಿಯ ಜಾತ್ರೆಯನ್ನು ಕಳೆದ 21 ವರ್ಷಗಳಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರಲಾಗುತ್ತಿದೆ.

ಅನ್ಯಾಯ ಮತ್ತು ಕಳ್ಳತನಕ್ಕೆ ಮಾರಕ ದೇವತೆ:

ದೇಸದ ವಿವಿಧ ಭಾಗಗಳಿಂದ ಪ್ರತಿ ತಿಂಗಳು ಅಮಾವಾಸ್ಯೆ, ಹುಣ್ಣಿಮೆ ದಿನ, ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡ ಜನತೆ ದೇವಿಯ ಬಳಿ ಬಂದು ಬೇಡಿಕೊಳ್ಳುತ್ತಾರೆ. ಮತ್ತು ಆ ವಸ್ತು ಮತ್ತೆ ದೊರೆಯುವುದು ನಿಶ್ಚಿತ ಎಂಬ ಪ್ರತೀತಿ ಇದೆ. ನ್ಯಾಯಾಲಯದಲ್ಲಿ ಅನೇಕ ದಶಕಗಳಿಂದ ವ್ಯಾಜ್ಯಗಳು ಬಗೆಹರಿಯದೆ ಇದ್ದಾಗ, ದೇವಸ್ಥಾನಲ್ಲಿ ಕುಳಿತು ವ್ಯಾಜ್ಯಗಳು ಬಗೆಹರಿಸಿಕೊಳ್ಳಲಾಗುತ್ತದೆ. ತಿಳಿದೋ ತಿಳಿಯದೋ ಮಾಡಿದ ಅಪರಾಧವನ್ನು ಒಪ್ಪಿಕೊಂಡು ದೇವಿಗೆ ನಮಿಸಿದರೆ ಕ್ಷಮೆ ಎಂಬುದು ಇಲ್ಲಿ ಇದೆ. ಸಂತಾನ ಪ್ರಾಪ್ತಿಗಾಗಿ ಅಸಂಖ್ಯಾತ ಜನ ಇಲ್ಲಿ ಬಂದು ಸಂತಾನ ಭಾಗ್ಯ ಪಡೆದಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರು.

ದಿವ್ಯ ದೇವಿಗೆ ಭವ್ಯ ದೇವಸ್ಥಾನ

ಕೂಸನೂರ ಗ್ರಾಮದ ದ್ಯಾಮವ್ವದೇವಿಯ ದೇವಸ್ಥಾನ ಶಿಥಿಲಾವಸ್ಥೆಯಲ್ಲಿತ್ತು. ಗ್ರಾಮದ ಹಿರಿಯರು 2022ರ ಫೆಬ್ರವರಿ 2ರಂದು ಹಳೇ ದೇವಸ್ಥಾನ ಕೆಡವಿ, ಕೋಟ್ಯಂತರ ರೂ. ವೆಚ್ಚದಲ್ಲಿ ನೂತನ ದೇವಸ್ಥಾನಕ್ಕೆ ಭೂಮಿ ಪೂಜೆ ನೆರವೇರಿಸಿದರು. ಭವ್ಯ ದೇವಸ್ಥಾನ ನಿರ್ವಣಗೊಂಡಿದ್ದು, ಆಕರ್ಷಕವಾಗಿ ಕಂಗೊಳಿಸುತ್ತಿದೆ. ಚಿಕ್ಕಬಳ್ಳಾಪುರದ ಶಿಲೆಗಳನ್ನು ತಂದು 20 ಶಿಲ್ಪಿಗಳು ನಿರಂತರ ಮೂರು ವರ್ಷಗಳ ಕಾಲ ಕೆತ್ತನೆ ನಡೆಸಿದ್ದಾರೆ. ಒಟ್ಟು 50 ಕಾರ್ವಿುಕರ ಶ್ರಮದಿಂದ ದೇವಸ್ಥಾನ ಲೋಕಾರ್ಪಣೆಗೆ ಸಜ್ಜಾಗಿದೆ. ನಾವು ಅನೇಕ ದೇವಸ್ಥಾನಗಳನ್ನು ನಿರ್ವಿುಸಿದ್ದೇವೆ. ಆದರೆ, ಕೂಸನೂರಿನ ಗ್ರಾಮದೇವಿಯ ದೇವಸ್ಥಾನ ನಿರ್ವಣದ ವೇಳೆ ಒಂದೇ ಒಂದು ಸಮಸ್ಯೆ ಎದುರಾಗದೆ ಇರುವುದು ನಮಗೆ ಹೊಸ ಅನುಭವ ಎನ್ನುತ್ತಾರೆ ಮುರುಡೇಶ್ವರದ ಶಿಲ್ಪಿ ಜಯಂತ ಮೂಡಲಮನಿ.

ಸಮಾರಂಭದಲ್ಲಿಂದು:

ಫೆ. 3ರಂದು ಬೆಳಗ್ಗೆ 5 ಗಂಟೆಯಿಂದ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ದೇವಸ್ಥಾನ ಪ್ರವೇಶ ಕಾರ್ಯಕ್ರಮ ಜರುಗಲಿದೆ. ಗಂಗಾ, ಗೋವು, ವಾಸ್ತುಬಾಗಿಲು, ಬ್ರಹ್ಮಕಳಸ, ಆವರಣ ದೇವತಾ ಪೂಜೆ, ನವಗ್ರಹ, ಮೃತ್ಯುಂಜಯ ಶಾಂತಿ, ನೇತ್ರೋನ್ಮಮಿಲನ, ಮಹಾಬಲಿ ಹರಣ ಹಾಗೂ ಮಹಾ ಮಂಗಳಾರತಿ ಧಾರ್ವಿುಕ ಕಾರ್ಯಕ್ರಮ ಜರುಗಲಿದೆ. ಸಂಜೆ 6 ಗಂಟೆಗೆ ಪ್ರವಚನ ಮಂಗಲ ಸಮಾರಂಭ ಜರುಗಲಿದೆ. ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಶ್ರೀ, ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯ ಶ್ರೀ, ಹೋತನಹಳ್ಳಿಯ ಶಂಕರಾನಂದ ಶ್ರೀ, ಜ್ಯೊತಿರ್ಲಿಂಗಾನಂದ ಶ್ರೀ, ಚಿತ್ರದುರ್ಗದ ಶಿವಲಿಂಗಾನಂದ ಶ್ರೀ, ಮಡಿವಾಳ ಗುರುಪೀಠದ ಮಾಚಿದೇವ ಶ್ರೀ, ಶಿಗ್ಗಾಂವಿಯ ರುದ್ರಪ್ಪ ಬಡಿಗೇರ ಇತರರು ಪಾಲ್ಗೊಳ್ಳುವರು.

ಕೂಸನೂರ ಗ್ರಾಮದೇವಿ ಪವಾಡಗಳ ಮೂಲಕ ನಾಡಿನಲ್ಲಿ ಹೆಸರು ಮಾಡಿದ ಶಕ್ತಿದೇವತೆ. ದೇವಸ್ಥಾನ ನಿರ್ವಣಕ್ಕೆ ಮುಂದೆ ಬಂದಾಗ ಆತ್ಮವಿಶ್ವಾಸ ಮತ್ತು ಹಣ ಎರಡೂ ಇರಲಿಲ್ಲ. ಆದರೆ, ಇಂತಹ ದೇವಸ್ಥಾನ ಮತ್ತು ಸಮಾರಂಭ ನಡೆಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಈಗ ದೇವಿಯ ಆಶೀರ್ವಾದದಿಂದ ಎಲ್ಲವೂ ಸಾಧ್ಯವಾಗಿದೆ. ಇಂತಹ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದ ನಾವೇ ಧನ್ಯರು. | ಗಣೇಶ ದೇವಸೂರ, ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ, ಕೂಸನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net