

ವಿಜಯಪುರ: 12ನೇ ಶತಮಾನದ ಬಸವಾದಿ ಶರಣರು ಆಧ್ಯಾತ್ಮಿಕ, ಸತ್ಯ, ತತ್ವಗಳನ್ನು ಸಾಮರಸ್ಯಗೊಳಿಸಿದವರು. ಅಂತಹ ಶ್ರೇಷ್ಠ ಶಿವಶರಣರಲ್ಲಿ ಶರಣೆ ದಾನಮ್ಮ ಕೂಡ ಒಬ್ಬಳು ಎಂದು ಡಾ. ಸೋಮಶೇಖರ ವಾಲಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಟಕದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಾನುಭಗೋಷ್ಠಿಯಲ್ಲಿ ಶಿವಶರಣೆ ದಾನಮ್ಮದೇವಿಯ ಜೀವನ ಮತ್ತು ಅನುಭಾವ ಕುರಿತು ಮಾತನಾಡಿದ ಅವರು, ಶಿವಶರಣರು ನಮಗೆಲ್ಲ ಶರಣ ಮಾರ್ಗದಲ್ಲಿ ನಡೆಯುವುದನ್ನು ಕಲಿಸುವ ಮೂಲಕ ಜೀವನಕ್ಕೆ ಅಮೃತಮಾರ್ಗ ತೋರಿದವರು ಎಂದು ತಿಳಿಸಿದರು.
ದಾನಮ್ಮ ಶರಣ ಪರಂಪರೆಯಲ್ಲಿಯೇ ಸಾರ್ಥಕ ಬದುಕನ್ನು ಬಾಳಿದವರು. ಸಾಮಾಜಿಕ ಸಮಾನತೆ, ಬಡಜನರ ಏಳಿಗೆ, ವೈದಿಕ ಪರಂಪರೆ ಹೊಗಲಾಡಿಸಲು ಶ್ರಮಿಸಿದಳು. ಬಸವಣ್ಣನವರ ವಚನ ಸಾಹಿತ್ಯ ಪ್ರಚಾರ ಪಡಿಸಿದಳು. ಅಲ್ಲದೆ, ಸಾಮಾನ್ಯ ಜನರಿಗೆ ಲಿಂಗ ಪೂಜೆಯ ಮಹತ್ವ ತಿಳಿಸಿದರು. ಅವರ ಕಾಯಕ ತತ್ವ ನಮಗೆಲ್ಲ ಆದರ್ಶ ಎಂದರು.
ಅತಿಥಿ ಬಿ.ಟಿ. ಈಶ್ವರಗೊಂಡ ಮಾತನಾಡಿ, ಆದರ್ಶ ಬದುಕಿನ ಆಶಯಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದರು.
ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿದರು. ಸುವರ್ಣ ಕರ್ನಾಟಕ &50 ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಹಾಗೂ ಡಾಕ್ಟರೇಟ್ ಪದವಿ ಪಡೆದ ಪ್ರೊ. ಸುಭಾಸ ಕನ್ನೂರ ಅವರನ್ನು ಸನ್ಮಾನಿಸಲಾಯಿತು.
ಸಹದೇವ ನಾಡಗೌಡ, ಅಪ್ಪಾಸಾಹೇಬ ಕೋರಿ, ಪಲ್ಲವಿ ಕೆಂದೂಳಿ, ಡಾ. ವಿ.ಡಿ. ಐಹೊಳ್ಳಿ, ಎಸ್.ಎನ್. ಶಿವಣಗಿ, ಕಾಶೀನಾಥ ಅಣೆಪ್ಪನವರ, ಎಂ.ಜಿ. ಯಾದವಾಡ, ಶಿವಪುತ್ರ ಪೋಳ, ಮಲ್ಲಿಕಾರ್ಜುನ ಅವರಣ್ಣವರ, ರವೀಂದ್ರ ಬ್ಯಾಕೋಡ, ವಿ.ಎಂ. ಬಾಗಾಯತ, ಎಂ.ಎಂ. ಹುಂಡೇಕಾರ, ಪರಶುರಾಮ ಪೋಳ, ಕಸಬೇಗೌಡರ ಮತ್ತಿತರರಿದ್ದರು.
ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ದೊಡ್ಡಣ್ಣ ಭಜಂತ್ರಿ ವಂದಿಸಿದರು.