

ಇಸ್ಮಾಯಿಲ್ ನದಾಫ ನವಲಗುಂದ
ಪಟ್ಟಣದ ರಾಮಲಿಂಗ ಕಾಮದೇವರು ಭಕ್ತರ ಇಷ್ಟಾರ್ಥ ಈಡೇರಿಸುವ ದೈವವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಸವಣೂರ ಭಾಗದಲ್ಲಿ ನವಾಬರ ಆಡಳಿತಾವಧಿಯಲ್ಲಿ ಸಿದ್ಧಿಪುರುಷರೊಬ್ಬರು ತಪಸ್ಸಿನಲ್ಲಿ ನಿರತನಾಗಿದ್ದ ವೇಳೆ ಹೋಳಿ ಹುಣ್ಣಿಮೆಗೆ ಕಾಮನ ಮೂರ್ತಿ ಪ್ರತಿಷ್ಠಾಪಿಸಿ ಬಣ್ಣದಾಟ ಆಡುವ ವಿಷಯದಿಂದ ಪ್ರೇರೇಪಿತರಾದರು. ಆಗ ತನ್ನ ತಪಸ್ಸಿನ ಬಲದಿಂದ ಕಾಮಣ್ಣನ ಮೂರ್ತಿ ತಯಾರಿಸಬೇಕು ಎಂದು ಇಚ್ಛಿಸಿ, 99 ಬಗೆಯ ಗಿಡಮೂಲಿಕೆ ಬಳಸಿ ಕಾಮದೇವರ ಸುಂದರ ಮೂರ್ತಿ ತಯಾರಿಸಿದ್ದರು. ಇದಕ್ಕೆ ಇನ್ನೆರಡು ಗಿಡಮೂಲಿಕೆಗಳು ದೊರೆತಿದ್ದರೆ, ಈ ಕಾಮದೇವರಿಗೆ ಜೀವಕಳೆ ಬರುತ್ತಿತ್ತು ಎಂಬುದು ಪ್ರತೀತಿ. ನಂತರ ಸಿದ್ಧಿಪುರುಷರು ತಯಾರಿಸಿದ ಅಮೂಲ್ಯ ಮೂರ್ತಿಯನ್ನು ಶತಮಾನಗಳ ಹಿಂದೆಯೇ ಯಾರೋ ನವಲಗುಂದಕ್ಕೆ ತಂದು ಇಲ್ಲಿನ ರಾಮಲಿಂಗ ಓಣಿಯ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೂ ಏಕಾದಶಿಯೆಂದು ರಾತ್ರಿ ರಾಮಲಿಂಗ ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸುತ್ತ ಬರಲಾಗುತ್ತಿದೆ.
ಬೇಡಿದ್ದನ್ನು ಕೊಡುವ ದೇವರು ಎಂಬ ಖ್ಯಾತಿ ರಾಮಲಿಂಗ ಕಾಮದೇವರಿಗೆ ಬಂದಿದೆ. ಪಟ್ಟಣದಲ್ಲಿ ಐದು ದಿನ ಪಟ್ಟಣದಲ್ಲಿ ದೊಡ್ಡ ಜಾತ್ರೆಯ ಸಂಭ್ರಮ ಸೃಷ್ಟಿಯಾಗಿರುತ್ತದೆ. ರಾಜ್ಯ, ಹೊರ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸಿ, ಕಾಮನ ದರ್ಶನ ಪಡೆದು ತಮ್ಮ ಬೇಡಿಕೆ ನಿವೇದಿಸಿಕೊಳ್ಳುತ್ತಾರೆ. ಸಂತಾನ ಇಲ್ಲದವರು ಬೆಳ್ಳಿಯ ತೊಟ್ಟಿಲು, ವಿವಾಹಕ್ಕಾಗಿ ಬೆಳ್ಳಿ ಬಾಸಿಂಗ, ಆರೋಗ್ಯಕ್ಕಾಗಿ ಬೆಳ್ಳಿಯ ಕುದುರೆ, ಮನೆ ಕಟ್ಟಲು ಬೆಳ್ಳಿ ಕೊಡೆ, ವಿದ್ಯಾಭ್ಯಾಸಕ್ಕಾಗಿ ಬೆಳ್ಳಿ ಹಸ್ತ ಹೀಗೆ ವಿವಿಧ ಬಗೆಯ ಹರಕೆ ಸಲ್ಲಿಸಲಾಗುತ್ತದೆ. ಈ ಹರಕೆ ವಸ್ತುಗಳನ್ನು ಚಾರಿಟಬಲ್ ಸಂಸ್ಥೆಯವರೇ ನಿಗದಿತ ಶುಲ್ಕ ಪಡೆದು ಪೂರೈಸುತ್ತಾರೆ. ಹರಕೆಗೆ ಪಡೆದ ವಸ್ತುಗಳನ್ನು ಮನೆಯಲ್ಲಿಟ್ಟು ಪೂಜಿಸುವುದು ಪದ್ಧತಿ. ಇಷ್ಟಾರ್ಥ ಈಡೇರಿದ ನಂತರ ಕಾಮದೇವ ದರ್ಶನ ಪಡೆದು, ಪೂಜಿಸಿದ ವಸ್ತುವಿನೊಂದಿಗೆ ಇನ್ನೊಂದನ್ನು ಕಾಮನಿಗೆ ಸರ್ಮಪಿಸುವುದು ಸಂಪ್ರದಾಯವಾಗಿದೆ.
ಜಗತ್ತಿನಾದ್ಯಂತ ದೇವಸ್ಥಾನದಲ್ಲಿ ಪೂಜಾರಿ-ಅರ್ಚಕ, ಮಸೀದಿಯಲ್ಲಿ ಪೀರಾಗಳು, ಚರ್ಚ್ಗಳಲ್ಲಿ ಫಾದರ್ ಇರುತ್ತಾರೆ. ಆದರೆ, ಪಟ್ಟಣದ ರಾಮಲಿಂಗ ಕಾಮದೇವರಿಗೆ ಪೂಜಾರಿಯೇ ಇಲ್ಲ. ಬರುವ ಭಕ್ತರೇ ಇಲ್ಲಿ ಪೂಜಾರಿಗಳು. ಕಾಮದೇವನಿಗೆ ಸಮರ್ಪಿಸುವ ಹೂವೇ ಮಂತ್ರ, ನೈವೇದ್ಯವೇ ಭಕ್ತರಿಗೆ ಪ್ರಸಾದ. ಹೋಳಿ ಹುಣ್ಣಿಮೆಯಂದು ಜರುಗುವ ಪೂಜಾ ಕೈಂಕರ್ಯಗಳಿಂದಲೂ ಪೂಜಾರಿಗಳು ದೂರ ದೂರ. ಮಂತ್ರ ಘೊಷಣೆ, ಅರ್ಚನೆ ನೇಮಗಳೂ ಇಲ್ಲ. ಇಲ್ಲಿಗೆ ಬರುವ ಭಕ್ತರೇ ಪೂಜೆ ಸಲ್ಲಿಸಿ, ಹರಕೆ ಹೊರುವುದು ಇಲ್ಲಿನ ವೈಶಿಷ್ಟ್ಯಾಗಿದೆ.
ರಾಮಲಿಂಗ ಕಾಮದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ರಾಮಲಿಂಗ ಚಾರಿಟಬಲ್ ಟ್ರಸ್ಟ್ ಸಂಸ್ಥೆ, ಪುರಸಭೆ, ಪಟ್ಟಣದ ಜನತೆ ಐದು ದಿನ ಅನ್ನ ಸಂತರ್ಪಣೆ, ದಣಿವಾರಿಸಲು ತಂಪು ಪಾನೀಯ, ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರಿಗೆ ದೇವರ ದರ್ಶನಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. | ಲಿಂಗರಾಜ ಸಿದ್ದರಾಮಶೆಟ್ಟರ್, ಟ್ರಸ್ಟ್ ಅಧ್ಯಕ್ಷ