ಕೈಹಿಡಿದು ಬೇರೆಡೆ ಕಳಿಸಿದ ದೇವರು !

Kasheer Tour
Published on

ಮರಿದೇವ ಹೂಗಾರ ಹುಬ್ಬಳ್ಳಿ

ಪಹಲ್ಗಾಮ್‌ನಲ್ಲಿ ನಾವು ಓಡಾಡಿದ್ದು ಏ. 18ರಂದು. ಭಯೋತ್ಪಾದಕರ ದಾಳಿ ನಡೆದದ್ದು 22ರಂದು. ನಮಗೆ ಪಹಲ್ಗಾಮ್ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಅಲ್ಲಿನ ಪ್ರಾಕೃತಿಕ ಸೌಂದರ್ಯ ನಮ್ಮನ್ನು ಸೆರೆಹಿಡಿತ್ತು. ಸ್ವರ್ಗದಲ್ಲಿದ್ದೇವೆಂಬ ಭಾವನಾಲೋಕದಲ್ಲಿದ್ದೆವು. ಆದರೆ, ದೇವರು ನಮ್ಮನ್ನು ಬೇರೆಡೆ ಹೋಗುವಂತೆ ಕೈಹಿಡಿದು ನಡೆಸಿರಬೇಕು...

ಹುಬ್ಬಳ್ಳಿಯಿಂದ ಕಾಶ್ಮೀರ ಪ್ರವಾಸಕ್ಕೆ ತೆರಳಿ ಬಚಾವ್ ಆಗಿ ಬಂದಿರುವ ಕಲ್ಯಾಣಶೆಟ್ಟರ್ ಕುಟುಂಬ, ದೇವರನ್ನು ಸ್ಮರಿಸಿದ್ದು ಹೀಗೆ.

ಬೇಸಿಗೆ ರಜೆ ಎಂದ ಮೇಲೆ ಚೆನ್ನಾಗಿರುವ ತಾಣಗಳಿಗೆ ಹೋಗಬೇಕೆಂಬ ಮನಸ್ಸಾಗುವುದು ಸಹಜ. ಅಂತೆಯೇ ಕಲ್ಯಾಣಶೆಟ್ಟರ್ ಕುಟುಂಬದ 45 ಜನರು ಏ. 11ರಂದು ಹುಬ್ಬಳ್ಳಿಯಿಂದ ಬಸ್ ಮೂಲಕ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು.

14ರಂದು ಕಾಶ್ಮೀರ ತಲುಪಿ, 15ರಂದು ಸ್ಥಳೀಯವಾಗಿರುವ ಪ್ರವಾಸಿ ತಾಣಗಳನ್ನು ನೋಡಿದ್ದರು. 15, 16 ಮತ್ತು 17ರಂದು ಗುಲ್ಮಾರ್ಗ್, ಸೋನ್ಮಾಗ್ ಸೇರಿ ಕೆಲ ಪ್ರದೇಶ ನೋಡಿ, ದುರ್ಗಮ ಮಾರ್ಗದಲ್ಲಿ 7 ಕಿ.ಮೀ. ಬೆಟ್ಟ, ಗುಡ್ಡವನ್ನು ಕುದುರೆ ಮೇಲೆ ಸವಾರಿ ಮಾಡಿ 18ರಂದು ಪಹಲ್ಗಾಮ್ ತಲುಪಿದ್ದರು. ಅಲ್ಲಿಯ ಪ್ರಾಕೃತಿಕ ಸೌಂದರ್ಯ ನೋಡುವುದೇ ಸೌಭಾಗ್ಯವೆಂದು ಭಾವಿಸಿ, ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲಿಯೇ ಕುಣಿದು-ಕುಪ್ಪಳಿಸಿ, ಫೋಟೋಕ್ಕೆ ಫೋಸ್ ಕೊಟ್ಟು ಬೈಸರನ್ ವ್ಯಾಲಿಗೆ ವಾಪಸ್ ಆಗಿದ್ದಾರೆ. ಅಲ್ಲಿಂದ ಮರಳಿ ಹುಬ್ಬಳ್ಳಿಗೆ ಆಗಮಿಸಿದೆ ಕಲ್ಯಾಣಶೆಟ್ಟರ್ ಕುಟುಂಬ.

ಬಂದ ಮೂರೇ ದಿನದಲ್ಲಿ ಪಹಲ್ಗಾಮ್ ದುರಂತ ಕೇಳಿ, ನೋಡಿ ಹೌಹಾರಿದ್ದಾರೆ. ನಾವು ಹೋಗಿದ್ದ ಸ್ಥಳದಲ್ಲಿ ಹೀಗಾಯಿತೇ? ಇದೆಂಥ ದುರ್ದೈವ? ಅದೆಷ್ಟೋ ಭಾರತೀಯರ ಪ್ರಾಣ ತೆಗೆದ ದುರುಳರ ಮೇಲೆ ಕೋಪ ಹೆಚ್ಚಿದೆ. ಸ್ಥಳೀಯವಾಗಿಯೇ ಇದ್ದು ಧರ್ಮದ ಹೆಸರು ಕೇಳಿ ಗುಂಡು ಹಾರಿಸಿರುವುದನ್ನು ಕೇಳಿ ಬೆಚ್ಚಿ ಬಿದ್ದಿದ್ದಾರೆ.

ಉಗ್ರರ ವಿರುದ್ಧ ಪ್ರತೀಕಾರವಾಗಲಿ

ಭಾರತದ ಮುಕುಟಮಣಿ ಜಮ್ಮು-ಕಾಶ್ಮೀರ ಸೌಂದರ್ಯದ ಖನಿ. ಸ್ವರ್ಗವೇ ಮೈವೆತ್ತಂತಿರುವ ಈ ಪ್ರದೇಶಕ್ಕೆ ಪ್ರವಾಸಿಗರ ದಂಡು ಹೆಚ್ಚಾಗಿ ಬರುತ್ತಿದೆ. ಅದರಂತೆಯೇ ನಾವು ಅಲ್ಲಿಗೆ ಹೋಗಿದ್ದೆವು. ಆದರೆ, ಅಲ್ಲಿ ನಾವು ಸವಿದ ಸೌಂದರ್ಯ, ಮನೋರಂಜನೆಯನ್ನು ಯಾರ ಮುಂದೆಯೂ ಹೇಳಿಕೊಳ್ಳದಂತೆ ಉಗ್ರರ ದಾಳಿ ಮಾಡಿ ಬಿಟ್ಟಿದೆ. ಉಗ್ರರ ವಿರುದ್ಧ ಭಾರತ ಪ್ರತೀಕಾರ ತೆಗೆದುಕೊಳ್ಳಬೇಕು ಎಂದು ರಾಜೇಶ್ವರಿ ಕಲ್ಯಾಣಶೆಟ್ಟರ್ ಆಗ್ರಹಿಸಿದರು.

ಪಹಲ್ಗಾಮ್ ಶಾಂತ ಮತ್ತು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿತ್ತು. ಉಗ್ರರ ದಾಳಿಗೂ ಎರಡು ದಿನದ ಹಿಂದೆ ನಾವು ಪಾಪಸ್ ಬಂದೆವು. ಇಲ್ಲಿ ಹೆಚ್ಚಿನ ಭದ್ರತೆ ಅಗತ್ಯವಿಲ್ಲ. ಕಾಶ್ಮೀರದ ವಿವಿಧೆಡೆ ಭಾರಿ ಮಳೆ ಮತ್ತು ಭೂ ಕುಸಿತವಾಗಿತ್ತು. ಪಹಲ್ಗಾಮ್ ಸುರಕ್ಷಿತವೆಂದು ಕಾಡಿನ ಮಾರ್ಗದಿಂದ ಇತ್ತ ಬಂದು ದಾಳಿ ಮಾಡಿರಬಹುದು. ರಾಜೇಶ ಕಲ್ಯಾಣಶೆಟ್ಟರ್, ಪಹಲ್ಗಾಮ್ ಪ್ರವಾಸ ಮಾಡಿದವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net