ದೊಡ್ಡಕಲ್ಲು ಬನ್ನಿ ಉತ್ಸವಕ್ಕೆ ಭವ್ಯ ಮೆರಗು

dg temple
Published on

ಧನಂಜಯ ಎಸ್. ಹಕಾರಿ ದಾವಣಗೆರೆ
ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಮಾದನಬಾವಿ ಗ್ರಾಮದ ದೊಡ್ಡಕಲ್ಲು ಕಟ್ಟೆಯ ಬನ್ನಿ ಮಹೋತ್ಸವ 3 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, ಸುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವರ ಪಲ್ಲಕ್ಕಿ ಮೆರವಣಿಗೆ ಹಬ್ಬದ ವಾತಾವರಣ ಇಮ್ಮಡಿಗೊಳಿಸಲಿದೆ.

ಮೈಸೂರು ದಸರಾ ಮುಗಿದು ವಾರದ ಬಳಿಕ ಹೊನ್ನಾಳಿ ಮಾರಿಕೊಪ್ಪ ದೇವಸ್ಥಾನದ ಹಳದಮ್ಮ ದೇವಿ ಬನ್ನಿ ಉತ್ಸವ ನಡೆಯಲಿದೆ. ಪ್ರತಿವರ್ಷ ಭೂಮಿಹುಣ್ಣಿಮೆ ಅಸುಪಾಸಿನಲ್ಲಿ ಹಬ್ಬ ನಡೆಯಲಿದ್ದು, ಮಾರನೆಯ ದಿನ ಮಾದನಬಾವಿ ಗ್ರಾಮದ ದೊಡ್ಡಪ್ಪ ದೇವರು ಬನ್ನಿ ಮುಡಿಯಲಿದೆ.

ದೂರದ ಊರುಗಳಿಂದ ಬರುವ ಸಾವಿರಾರು ಭಕ್ತರು ಹಳದಮ್ಮ ದೇವಿ ಬನ್ನಿ ಉತ್ಸವ ಮುಗಿಸಿಕೊಂಡು ಸಂಜೆ ವೇಳೆಗೆ ಮಾದನಬಾವಿ ಗ್ರಾಮಕ್ಕೆ ಬಂದು ಕಲ್ಲಪ್ಪನ ಕಟ್ಟೆಯಲ್ಲಿ ವಾಸ್ತವ್ಯ ಹೂಡುತ್ತಾರೆ.

ಉಯ್ಯಲೆಯಾಡುವ ದೇವರು: ಭೂಮಿ ಹುಣ್ಣಿಮೆ ದಿನದಂದು ಮಾದನಬಾವಿ ಗ್ರಾಮದಲ್ಲಿ ವೀರಭದ್ರೇಶ್ವರ ಮತ್ತು ರಂಗನಾಥ ಸ್ವಾಮಿ ಬನ್ನಿ ಮಹೋತ್ಸವವಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಆಗಮಿಸುವ ದೇವರುಗಳು ರಂಗಪ್ಪನ ಗುಡಿ ಎದುರು ಇರುವ ಉಯ್ಯಲೆ ಮಂಟಪದಲ್ಲಿ ಪಲ್ಲಕ್ಕಿ ಸಹಿತ ಕುಳಿತು ತೂಗುಯ್ಯಲೆ ಆಡಲಿದೆ. ಬಳಿಕ ತಮ್ಮ ತಮ್ಮ ದೇವಸ್ಥಾನಗಳಿಗೆ ತೆರಳಲಿವೆ.

11 ದೇವರ ಮುಖಾಮುಖಿ: ಮಾದನಬಾವಿ ಗ್ರಾಮದ ವೀರಭದ್ರೇಶ್ವರಸ್ವಾಮಿ, ರಂಗನಾಥಸ್ವಾಮಿ, ಗವಿಸಿದ್ದೇಶ್ವರ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಬೆನಕನಹಳ್ಳಿ ಬೀರಲಿಂಗೇಶ್ವರ ಸ್ವಾಮಿ, ಅರಬಗಟ್ಟೆಯ ಚಿಕ್ಕಪ್ಪ ದೇವರು (ಎರೆಹೊಲದ ಒಡೆಯ), ಮೂಡಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಶುಕ್ರವಾರ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ.

ನಂತರ, ಕಲ್ಲಪ್ಪನ ಕಟ್ಟೆಯ ಹೊರ ಬೀರಲಿಂಗೇಶ್ವರ ದೇವಸ್ಥಾನದ ಎದುರಿನ ಬನ್ನಿ ವೃಕ್ಷಕ್ಕೆ ರಾತ್ರಿ 10 ಗಂಟೆಗೆ ಪೂಜೆ ಸಲ್ಲಿಸಿ ದೇವರ ಗಣಮಗ ಅಂಬು ಹೊಡೆಯುವ ಮೂಲಕ ಬನ್ನಿ ಮುಡಿಯಲಾಗುವುದು.

ವಸತಿ, ಪ್ರಸಾದ ವ್ಯವಸ್ಥೆ: ಬನ್ನಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ರಾತ್ರಿ ಊಟ, ಬೆಳಗಿನ ಉಪಹಾರ ಹಾಗೂ ಕಲ್ಲಪ್ಪನ ಕಟ್ಟೆಯ ಬೀರಲಿಂಗೇಶ್ವರ ದೇಗುಲದ ಸಮುದಾಯ ಭವನದಲ್ಲಿ ವಸತಿ ವ್ಯವಸ್ಥೆ ಇರುತ್ತದೆ.
ಬೆಟ್ಟ ಹತ್ತುವ ಉತ್ಸವ ಮೂರ್ತಿ: ಗವಿಸಿದ್ದೇಶ್ವರ ದೇವರು ನೆಲೆಸಿರುವ 20 ಅಡಿ ಎತ್ತರದ ದೊಡ್ಡಕಲ್ಲಿನ ಬೆಟ್ಟದಲ್ಲಿ ಬನ್ನಿ ಉತ್ಸವಕ್ಕೆ ಆಗಮಿಸುವ ಎಲ್ಲ ದೇವರ ಸಮಾಗಮವಾಗುತ್ತವೆ. ಬೆಟ್ಟದಲ್ಲಿ ಎಂತಹದ್ದೇ ಜಾರಿಕೆ ಇದ್ದರೂ ಭಕ್ತರು ದೇವರ ಪಲ್ಲಕ್ಕಿ ಹೊತ್ತು ಬೆಟ್ಟ ಹತ್ತುತ್ತಾರೆ.

ದೇವರ ಪಲ್ಲಕ್ಕಿಯನ್ನು ದೊಡ್ಡಕಲ್ಲು ಬೆಟ್ಟದ ಮೇಲೆ ಹೊತ್ತು ಸಾಗುವುದು ವಾಡಿಕೆ. ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಬೆನಕನಹಳ್ಳಿ, ಹರಳಹಳ್ಳಿ, ಮಾದನಬಾವಿ ಗ್ರಾಮಗಳ ಬೀರಲಿಂಗೇಶ್ವರ, ಮುರುಡೇಶ್ವರ ಸ್ವಾಮಿ ಉತ್ಸವ ಮೂರ್ತಿಗಳು ಮುಮ್ಮುಖವಾಗಿ ಬೆಟ್ಟ ಏರಿದರೆ, ಅಣಜಿ ಗ್ರಾಮದ ಬೀರಲೀಂಗೇಶ್ವರ ಸ್ವಾಮಿ ಹಿಮ್ಮುಖವಾಗಿ ಬೆಟ್ಟ ಏರಲಿದೆ.

ದೇವರು ಬೆಟ್ಟ ಹತ್ತುವ ಪ್ರಸಂಗ ನೋಡಲು ಸಾವಿರಾರು ಭಕ್ತರು ಸುತ್ತಲೂ ಹತ್ತಾರು ಹಳ್ಳಿಗಳಿಂದ ಆಗಮಿಸುತ್ತಾರೆ. ಅರಬಗಟ್ಟೆ, ಹರಳಹಳ್ಳಿ, ಕುಂದೂರು, ಅಣಜಿ, ತಿಮ್ಲಾಪುರ, ಶಿವಮೊಗ್ಗ, ಬೆನಕನಹಳ್ಳಿ, ಹೊಳೆಹೊನ್ನೂರು, ಹೊನ್ನಾಳಿ, ಭದ್ರಾವತಿ, ಶಿಕಾರಿಪುರ ಸೇರಿ ಇತರೆಡೆಗಳಿಂದ ಸಾವಿರಾರು ಭಕ್ತರು ಉತ್ಸವಕ್ಕೆ ಆಗಮಿಸುತ್ತಾರೆ.

ಮೂರು ದಿನ ಆಚರಣೆ: ಮಾದನಬಾವಿಯಲ್ಲಿ ಅ.19ರ ವರೆಗೆ ಊರ ಬನ್ನಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಗುರುವಾರ ಗ್ರಾಮದ ವೀರಭದ್ರೇಶ್ವರ ಹಾಗೂ ರಂಗನಾಥಸ್ವಾಮಿ ದೇವರು ಬನ್ನಿ ಮುಡಿದಿವೆ. ಶುಕ್ರವಾರ ಸುತ್ತಲೂ ಗ್ರಾಮಗಳ 11 ದೇವರ ಮುಖಾಮುಖಿಯೊಂದಿಗೆ ರಾತ್ರಿ 10 ಗಂಟೆಗೆ ಅಂಬಿನೋತ್ಸವ ನಡೆಯಲಿದೆ. ಶನಿವಾರ ಬೆಳಗ್ಗೆ ಎಲ್ಲ ದೇವರುಗಳು ದೊಡ್ಡ ಕಲ್ಲು ಬೆಟ್ಟ ಹತ್ತುವ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.

ಮೂರು ದಿನಗಳ ಕಾಲ ನಡೆಯುವ ಬನ್ನಿ ಉತ್ಸವದಲ್ಲಿ ಮೊದಲ ದಿನ ದೇವರುಗಳಿಗೆ ಉಯ್ಯಲೆ, 2ನೇ ದಿನ ಅಂಬಿನೋತ್ಸವ, ಕೊನೆಯ ದಿನ ದೇವರ ಪಲ್ಲಕ್ಕಿ ಹೊತ್ತ ಭಕ್ತರು ದೊಡ್ಡಕಲ್ಲು ಬೆಟ್ಟ ಹತ್ತಲಿದ್ದಾರೆ. ಎನ್.ಸಿ. ದೇವರಾಜಪ್ಪ, ಶಿಕ್ಷಕರು

ಎನ್.ಸಿ. ದೇವರಾಜಪ್ಪ, ಶಿಕ್ಷಕರು

ವಿಶ್ವ ವಿಖ್ಯಾತ ಮೈಸೂರು ದಸರಾ ನಡೆದ ದಿನದಲ್ಲಿ ಇತರೆಡೆ ಬನ್ನಿ ಆಚರಿಸಲಾಗುವುದು. ಆದರೆ, ಮಾದನಬಾವಿಯಲ್ಲಿ ಅನಾದಿಕಾಲದಿಂದಲೂ ದಸರಾ ಮುಗಿದು ವಾರದ ಬಳಿಕ ಬನ್ನಿ ಮಹೋತ್ಸವ ಆಚರಣೆ ನಡೆಯುತ್ತಿರುವುದು ವಿಶೇಷ. ಕಾಡಪ್ಪ ಅಂಗಡಿ, ಮುಖಂಡ

ಕಾಡಪ್ಪ ಅಂಗಡಿ, ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net