

ಮುದ್ದೇಬಿಹಾಳ: ಸನಾತನ ಧರ್ಮದ ಉಳಿವಿಗಾಗಿ ದಾನ, ಧರ್ಮ, ಪೂಜೆ, ಪುನಸ್ಕಾರ, ದೇವಸ್ಥಾನ ನಿರ್ಮಾಣ, ಸತ್ಯದ ನಡವಳಿಕೆ, ಲಿಂಗಪೂಜೆ ಅಗತ್ಯವಾಗಿದೆ ಎಂದು ಶ್ರೀಶೈಲದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.
ಪಟ್ಟಣದ ವಿನಾಯಕ ನಗರದಲ್ಲಿ ಸೋಮವಾರ ಸಂಜೆ ನಡೆದ ನೂತನ ಭದ್ರಕಾಳಿ ಸಹಿತ ವೀರಭದ್ರೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ದೇವರು, ಧರ್ಮ ಭಾರತ ದೇಶದ ಜೀವಾಳವಾಗಿವೆ. ಹಣೆಯ ಮೇಲೆ ವಿಭೂತಿ ಇಲ್ಲದವರಿಗೆ, ದೇವಾಲಯ ಇಲ್ಲದ ಊರಿಗೆ ವೇದವು ಧಿಕ್ಕಾರ ಹೇಳುತ್ತದೆ ಎಂದು ತಿಳಿಸಿದರು.
ಸಚಿವ ಶರಣಬಸಪ್ಪ ದರ್ಶನಾಪುರ ಅವರ ಆಪ್ತ ಕಾರ್ಯದರ್ಶಿ, ಕೆಎಎಸ್ ಅಧಿಕಾರಿ ಶ್ರೀಶೈಲ ಬಿದರಕುಂದಿ ಮಾತನಾಡಿ, ಸನಾತನ ಧರ್ಮ ಉಳಿಸಲು ಪಂಚಪೀಠಗಳು ಶ್ರಮಿಸುತ್ತಿವೆ. ಅವುಗಳಲ್ಲಿ ಒಬ್ಬರಾಗಿರುವ ಶ್ರೀಶೈಲ ಜಗದ್ಗುರುಗಳ ಮಾರ್ಗದರ್ಶನ ಎಲ್ಲರಿಗೂ ಅಗತ್ಯವಾಗಿದೆ. ಭಕ್ತರು ವೀರಭದ್ರ ದೇವರನ್ನು ಪೂಜಿಸುವುದಷ್ಟೇ ಅಲ್ಲದೆ ದೇಶಕ್ಕೆ ಸಂಕಟ ಬಂದಾಗ ವೀರಭದ್ರನಾಗಿ ಗಂಡೆದೆ ತೋರಿಸಬೇಕು. ಸನಾತನ ಧರ್ಮದಲ್ಲಿ ಜನಿಸಿರುವ ನಾವು ಪುಣ್ಯವಂತರು ಎಂದರು.
ಕಾಂಗ್ರೆಸ್ ಮುಖಂಡ, ಅಸ್ಕಿ ೌಂಡೇಷನ್ ಅಧ್ಯಕ್ಷ ಸಿ.ಬಿ. ಅಸ್ಕಿ ಮಾತನಾಡಿ, ದಾಸೋಹ ಶ್ರೇಷ್ಠವಾದದ್ದಾಗಿದೆ. ವಿನಾಯಕನಗರದ ಶ್ರದ್ಧಾಭಕ್ತಿಯ ಯುವಕರು ದೇವಸ್ಥಾನ ನಿರ್ಮಿಸಿದ್ದು ಶ್ಲಾಘನೀಯ ಎಂದರು.
ತುಮಕೂರಿನ ವಲಯಶಾಂತಮುನಿ ಶಿವಾಚಾರ್ಯರು, ಕರಭಂಟನಾಳದ ಶಿವಕುಮಾರ ಸ್ವಾಮಿಗಳು, ಸಿದ್ದನಕೊಳ್ಳದ ಶಿವಕುಮಾರ ಸ್ವಾಮಿಗಳು, ಪ್ರವಚನಕಾರ ಇಟಗಿ ಭೂಕೈಲಾಸ ಮೇಲುಗದ್ದುಗೆಮಠದ ಗುರುಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ ಮಾತನಾಡಿದರು. ಹೂವಿನಹಿಪ್ಪರಗಿಯ ಅಭಿಷೇಕ ದೇವರು, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಸದಸ್ಯರಾದ ಚನ್ನಪ್ಪ ಕಂಠಿ, ಬಸಪ್ಪ ತಟ್ಟಿ, ಗಣ್ಯರಾದ ಸೋಮನಗೌಡ ಪಾಟೀಲ ನಡಹಳ್ಳಿ, ಬಸವರಾಜ ಮೋಟಗಿ, ಮಹಾಂತೇಶ ಶೆಟ್ಟರ, ಸತೀಶಕುಮಾರ ಓಸ್ವಾಲ್, ಪುರಸಭೆ ಮಾಜಿ ಅಧ್ಯಕ್ಷ ದಾನಪ್ಪ ನಾಗಠಾಣ, ದೇವಸ್ಥಾನ ಸಮಿತಿ ಅಧ್ಯಕ್ಷ ಶಾಹೀಲ್ ನಾಗಠಾಣ, ವಿನೋದ ನಾಗಠಾಣ, ಚಂದ್ರಕಾಂತ ಹೆಬ್ಬಾಳ, ಈರಣ್ಣ ಬಡಿಗೇರ, ಶ್ರೀಶೈಲ ಘನಕುಮಾರಮಠ, ಸಚಿನ್ ಹೊಕ್ರಾಣಿ, ಚೇತನ ಕಲ್ಲುಂಡಿ, ಸಂತೋಷ ಘನಕುಮಾರಮಠ, ವೀರೇಶ ಅಗಸಬಾಳ, ಅಪ್ಪ್ಪು ಸಾಲಿಮಠ ಇತರರಿದ್ದರು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಶಿಕ್ಷಕ ವಾಗೇಶ ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಐ.ಬಿ. ಹಿರೇಮಠ ನಿರೂಪಿಸಿ ವಂದಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಚಟುಚಟಿಕೆಗಳು ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಶ್ರದ್ಧಾಭಕ್ತಿಯೊಂದಿಗೆ ನೆರವೇರಿದರು.