

ಗೋಕರ್ಣ: ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದು ಬಹು ಕಠಿಣವಾದ ಕಾರ್ಯ. ದೈವ ಸಾಕ್ಷಾತ್ಕಾರಕ್ಕೆ ನಿರಂತರ ಪ್ರಯತ್ನ, ಸತತ ಪರಿಶ್ರಮ, ಅವಿರತ ತಪಸ್ಸು ಬೇಕು. ಆದರೆ, ಗುರುಸೇವೆಯ ಮಾರ್ಗದಿಂದ ಮಾತ್ರ ದೇವರನ್ನು ಅನಾಯಾಸ ಮತ್ತು ಸುಲಭವಾಗಿ ಒಲಿಸಿಕೊಳ್ಳಬಹುದಾಗಿದೆ ಎಂದು ಅಶೋಕೆಯ ವಿಶ್ವವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ದೀಕ್ಷೆಯಲ್ಲಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಇಟಗಿ, ದೊಡ್ಮನೆ, ಚಪ್ಪರಮನೆ ವಲಯದ ಶಿಷ್ಯ ಭಕ್ತರ ಭಿಕ್ಷಾಸೇವೆ ಸ್ವೀಕರಿಸಿ ಮಂಗಳವಾರ ಆಶೀರ್ವದಿಸಿದರು.
ಗುರುಸೇವಾ ಮಾರ್ಗದಿಂದ ಲಭಿಸುವ ದೈವ ಸಾಕ್ಷಾತ್ಕಾರದ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬಹುದಾಗಿದೆ. ಈ ಸತ್ಕಾರ್ಯಕ್ಕೆ ಅಗತ್ಯವಿರುವ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಬೋಧಿಸುವ ಕಾರ್ಯ ಆಗಬೇಕು. ಸನಾತನ ಸಂಸ್ಕಾರಗಳ ಮತ್ತು ಆಧುನಿಕ ವಿದ್ಯೆಯನ್ನು ನವಪೀಳಿಗೆಗೆ ಧಾರೆ ಎರೆಯುವುದಕ್ಕಾಗಿಯೇ ನಿರ್ಮಿತವಾಗಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಈ ದಿಸೆಯಲ್ಲಿ ಭವಿಷ್ಯದ ಆಶಾಕಿರಣವಾಗಿದೆ. ಶ್ರೀಮಠದ ಶಿಷ್ಯಭಕ್ತರು ವಿವಿವಿಯ ಧ್ಯೇಯೋದ್ದೇಶಗಳ ಸಮಗ್ರ ಮಾಹಿತಿಯನ್ನು ಸಮಸ್ತ ಸಮಾಜಕ್ಕೆ ತಲುಪಿಸಬೇಕು ಎಂದರು.
ಸಿದ್ದಾಪುರ ಮಂಡಲಾಧ್ಯಕ್ಷ ಮಹೇಶ ಚಟ್ನಳ್ಳಿ, ಕಾರ್ಯದರ್ಶಿ ಚಂದನ ಶಾಸ್ತ್ರಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹವ್ಯಕ ಮಹಾಮಂಡಲದ ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ವಿವಿಧ ವಲಯಗಳ ಪದಾಧಿಕಾರಿಗಳಿಗೆ ನಿಯುಕ್ತಿಪತ್ರ ಮತ್ತು ಮಂತ್ರಾಕ್ಷತೆ ನೀಡಿ ಶ್ರೀಗಳು ಹರಸಿದರು.