

ಎಲ್ಲದಕ್ಕೂ ಮಣ್ಣೆ ಮೊದಲು. ದೇವರ ಸೃಷ್ಟಿಯಲ್ಲಿ ಎಲ್ಲದಕ್ಕೂ ಹೆಚ್ಚು ಮಹತ್ವ ಮಣ್ಣಿಗಿದೆ. ದೇವರು ಎಲ್ಲವೂ ಮಣ್ಣಿನಲ್ಲೇ ಅಡಕವಾಗುವಂತೆ ಮಾಡಿದ್ದಾನೆ. ಆದರೆ, ಮನುಷ್ಯ ಸ್ವಲ್ಪ ಶ್ರಮ ವಹಿಸದರೆ ಸಾಕು ಎಲ್ಲವನ್ನು ಮಣ್ಣು ನೀಡುವುದು.
ನಾವು ಬಳಸುವ ದೈನಂದಿನ ವಸ್ತುಗಳು, ಆಹಾರ ಧಾನ್ಯ, ಚಿನ್ನ, ವಜ್ರ, ಮುತ್ತು ಹಾಗೂ ರತ್ನದಂತಹ ಅಮೂಲ್ಯ ವಸ್ತಗಳನ್ನು ಮಣ್ಣಿನ ಮೂಲಕವೇ ನಾವು ಪಡೆದುಕೊಳ್ಳಬಹುದು. ಇಂತಹ ಅದ್ಭುತ ದೇವರ ಸೃಷ್ಟಿಯಲ್ಲಿ ಬಂದಿರುವ ನಾವು ಆನಂದಭರಿತ ಜೀವನವನ್ನು ನಡೆಸಬೇಕು.
ಯಾವ ರೀತಿ ಚಳಿಗಾಲ, ಮಳೆಗಾಲ ಹಾಗೂ ಬೇಸಿಗೆಕಾಲ ಬದಲಾಗುತ್ತ ಹೋಗುತ್ತವೆಯೋ ಅದೇ ರೀತಿ ಮನುಷ್ಯ ಜೀವನದಲ್ಲಿ ಕಷ್ಟ- ಸುಖಗಳು ಬರುತ್ತವೆ. ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಸಂತೋಷದಿಂದ ಬದುಕುವುದೇ ವೈಶಿಷ್ಟೃ. ಬೆಳಕು ಇಲ್ಲದೆ ಕತ್ತಲೆ ಇಲ್ಲ, ಕತ್ತಲೆ ಇರುವುದರಿಂದಲೇ ಬೆಳಕಿಗೆ ಮಹತ್ವ. ಆದರೆ, ನಿಸರ್ಗಕ್ಕೆ ಬೆಳಕು ಎಷ್ಟು ಮುಖ್ಯವೋ ಕತ್ತಲೆಯೂ ಅಷ್ಟೇ ಮುಖ್ಯ. ಹಾಗೆ ಮನುಷ್ಯನ ಜೀವನದಲ್ಲಿ ಕೇವಲ ಸುಖವಿದ್ದರೆ ಸಾಲದು, ಕಷ್ಟವೂ ಬೇಕು. ಇವೆರಡು ನಮ್ಮ ಜೀವನದಲ್ಲಿ ಬಂದು ಹೋಗುವುದರಿಂದಲೇ ಜೀವನ ಸ್ವಾರಸ್ಯಕರವಾಗಿರುತ್ತದೆ. ಅದೇ ಅಧ್ಯಾತ್ಮ. ಏನೇ ಇದ್ದರೂ ಚೆನ್ನಾಗಿ ಹಾಡುತ್ತಾ ನಲಿಯುತ್ತಾ ಜೀವನ ನಡೆಸಬೇಕು.
ಎಷ್ಟೇ ಶ್ರೀಮಂತಿಕೆ ಇರಲಿ ಅಥವಾ ಬಡತನವಿರಲಿ, ಜ್ಞಾನಿ ಪುರುಷವಾಗಿರಲಿ, ಮಹಾಂತನಾಗಿರಲಿ, ಪಕ್ಷಿ-ಪ್ರಾಣಿಗಳಿಗೂ ಕಷ್ಟ ಇದ್ದೇ ಇರುತ್ತದೆ. ಅದರಂತೆ ಸುಖವು ಪ್ರಾಪ್ತಿಯಾಗುತ್ತದೆ. ಬದುಕು ಅನ್ನೋದು ತುಂಬಿ ಹರಿಯುತ್ತಿರುವ ನದಿಯಲ್ಲಿ ಈಜುವುದಾಗಿದೆ. ದೊಡ್ಡ ತೆರೆಗಳು, ನೀರಿನ ಸೆಳೆತ ಇವೆಲ್ಲವನ್ನು ಸಹಿಸಿ ಈಜುತ್ತಾ ದಡ ಸೇರುವುದೇ ಜೀವನ.
ನಾವು ಇತಿಹಾಸವನ್ನು ತೆರೆದು ನೋಡಿದರೆ ತಿಳಿಯುತ್ತದೆ ಪುರುಷೋತ್ತಮನಾದ ಶ್ರೀರಾಮಚಂದ್ರ ರಾಜಪುತ್ರನಾದರೂ 14 ವರ್ಷ ಕಾಡಿನ ಮಧ್ಯೆ ಕಷ್ಟದ ಕಾಲ ಕಳೆಯಬೇಕಾಯಿತು. ಅಲ್ಲಿ ಯಾವ ಸೇವಕನು ಇಲ್ಲ. ಅರಣ್ಯದಲ್ಲಿ ಯಾರೂ ಇಲ್ಲ. ಅಂತಹ ಶ್ರೀರಾಮನಿಗೆ ಕಷ್ಟಗಳು ಬಿಟ್ಟಿಲ್ಲ. ನಮ್ಮಂತವರ ಪಾಡೇನು? ಶ್ರೀ ರಾಮನ ಕಥೆಯನ್ನು ವಾಲ್ಮೀಕಿ ಏಕೆ ಬರೆದಿದ್ದಾರೆ ಎಂದರೆ, ಜೀವನವೆಂದರೆ ಏನೆಂದು ತಿಳಿಸಲು ಬರೆದಿದ್ದಾರೆ. ಅಷ್ಟು ಕಷ್ಟದ ದಿನಗಳಲ್ಲೂ ಶ್ರೀರಾಮ ಸಂತೋಷದಿಂದ ಇದ್ದರು. ಅದೇ ಅಧ್ಯಾತ್ಮ.
ಮಹಾಭಾರತ ಯುದ್ಧ ಮುಗಿದ ಬಳಿಕ ಕೃಷ್ಣ ದ್ವಾರಕಾ ನಗರಕ್ಕೆ ಹೊರಡಲು ಸಿದ್ಧನಾದಾಗ ಮಹಾರಾಣಿ ದ್ರೌಪದಿ ಹೇಳುತ್ತಾಳೆ.‘ಆಪಧಾಃ ಸಂತುನ ಶಶ್ವತ್ ತತ್ರ ತತ್ರ ಜನಾರ್ದನ ಭವತಾಂ ಎದ್ ದರ್ಶನಂ ಶಾತ್ ಪುನರ್‌ಭವ್ ದರ್ಶನಂ’ ಎಂಬ ಸಂಸ್ಕೃತ ಶ್ಲೋಕವನ್ನು ಹೇಳುತ್ತಾಳೆ. ಅನೇಕ ಕಷ್ಟಗಳ ನಡುವೆಯೇ ಜೀವನ ಸಾಗಿಸಿದ ದ್ರೌಪದಿ ಕೃಷ್ಣನನ್ನು ಕೇಳುತ್ತಾಳೆ. ‘ನಮಗೆ ಮೇಲಿಂದ ಮೇಲೆ ಕಷ್ಟಗಳು ಬರುತ್ತಾ ಇರಲಿ. ನಮಗೆ ಕಷ್ಟ ಬಂದಾಗಲೆಲ್ಲ ಜನಾರ್ದನಾ ನೀನು ನಮ್ಮ ಹತ್ತಿರ ಇರುತ್ತಿಯಾ. ಇದರಿಂದ ನಿನ್ನ ದರ್ಶನ ಪದೇ ಪದೆ ನಮಗೆ ಆಗುತ್ತದೆ. ಕಷ್ಟಗಳಿಂದ ನಮ್ಮನ್ನು ಮುಕ್ತರನ್ನಾಗಿಸುತ್ತದೆ ಎಂದಳು. ಯಾವಾಗ ಕಷ್ಟಗಳು ಬರುತ್ತವೆ ಆಗ ನಮ್ಮ ಹತ್ತಿರ ಕೃಷ್ಣ ಇರುತ್ತಾನೆ. ಶ್ರೀರಾಮನಿಗೆ ಹಾಗೂ ದ್ರೌಪದಿಗೆ ಬಂದ ಕಷ್ಟಗಳು ನಮಗೆ ಬರುವುದಿಲ್ಲ. ಕಷ್ಟಗಳನ್ನು ಸಹಿಸುವ ಶಕ್ತಿ ಇರಬೇಕು. ಕಷ್ಟ ಕಾಲದಲ್ಲೂ ಸಂತೋಷದಿಂದ ಬದುಕುವುದೇ ಅಧ್ಯಾತ್ಮ. ಭಗವಂತನೇ ನಮಗೆ ಕಷ್ಟಗಳು ಬರುತ್ತಿರಲಿ. ಆ ಕಷ್ಟಗಳ ನಡುವೆಯೂ ಸಂತೋಷದಿಂದ ಬದುಕುವ ಹಾಗೇ ಕರುಣಿಸು ಎಂದು ಎಲ್ಲರೂ ಪ್ರಾರ್ಥಿಸಬೇಕು.