

ಚಳ್ಳಕೆರೆ: ಬುಡಕಟ್ಟು ಸಂಸ್ಕೃತಿಯಲ್ಲಿ ಹಿರಿಯರ ಆಚರಣಾ ಪದ್ಧತಿಯಡಿ ಪಶು ಪಾಲಕರು ರಕ್ಷಣೆ ಮಾಡಿಕೊಂಡು ಬಂದಿರುವ ನೂರಾರು ದೇವರ ಎತ್ತುಗಳ ಪೋಷಣೆ ನಮ್ಮೆಲ್ಲರ ಜವಾಬ್ದಾರಿ ಕೂಡ ಆಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 300 ದೇವರ ಎತ್ತುಗಳಿಗೆ ಪಶು ಇಲಾಖೆ ಯೋಜನೆಯಡಿ 80 ಸಾವಿರ ರೂ. ವೆಚ್ಚದಲ್ಲಿ ಮೇವು ಶನಿವಾರ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಇದರಿಂದ ಜಾನುವಾರುಗಳ ಮೇವಿಗೆ ಸಮಸ್ಯೆ ಕಾಡಬಹುದು. ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ದೇವರ ಎತ್ತುಗಳಿಗೆ ಪ್ರತ್ಯೇಕ ಮೇವು ಮತ್ತು ಮೂಲ ಸೌಕರ್ಯ ಕಲ್ಪಿಸುವಂತೆ ಪ್ರಸ್ತಾಪ ಮಾಡಲಾಗಿದೆ. ಅನುದಾನದ ವ್ಯವಸ್ಥೆ ಆಗುವ ತನಕ ಪಶು ಇಲಾಖೆ ಪೋಷಣೆ ಮಾಡಬೇಕಿದೆ. ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳದಲ್ಲಿದ್ದ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ರೇವಣ್ಣ ಮಾತನಾಡಿ, ತಾಲೂಕಿನಲ್ಲಿ 57 ಸಾವಿರ ಜಾನುವಾರುಗಳಿವೆ. ಇನ್ನೂ 13 ವಾರಗಳ ಕಾಲ ಮಳೆ ಬರದಿದ್ದರೂ ಮೇವಿನ ಕೊರತೆ ಇಲ್ಲ. ಆದರೂ, ಇಲಾಖೆ ಯೋಜನೆಯಡಿ ನನ್ನಿವಾಳ ಮತ್ತು ನಾಯಕನಹಟ್ಟಿ ಸಮೀಪ ಇರುವ ದೇವರ ಎತ್ತುಗಳಿಗೆ 8 ಟನ್ ಮೇವಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಪಶು ವೈದ್ಯಾಧಿಕಾರಿಗಳಾದ ಡಾ.ಶ್ರೀನಿವಾಸ್, ಡಾ. ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಶಶಿಧರ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಮುಖಂಡರಾದ ಸಿ.ಟಿ.ಶ್ರೀನಿವಾಸ್, ಎಂ.ಚೇತನ್‌ಕುಮಾರ್, ಗಾಂಧಿನಗರ ಕೃಷ್ಣ, ರುದ್ರಮುನಿ, ರಾಘವೇಂದ್ರ ಮತ್ತಿತರರು ಇದ್ದರು.