

ಹನೂರು: ತಾಲೂಕಿನ ಸಂದನಪಾಳ್ಯ ಗ್ರಾಮದ ಜಮೀನಿನಲ್ಲಿ ಶನಿವಾರ ರಾತ್ರಿ ಚಿರತೆ ದಾಳಿಗೆ ಮೇಕೆ ಹಾಗೂ ನಾಯಿಯೊಂದು ಬಲಿಯಾಗಿದೆ.
ಗ್ರಾಮದ ರಾಜೀವ್ ಅವರು ಜಮೀನಿನಲ್ಲಿ ಮೇಕೆಯನ್ನು ಕಟ್ಟಿ ಹಾಕಿದ್ದರು. ತಡರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಲಗ್ಗೆ ಇಟ್ಟ ಚಿರತೆ ದಾಳಿ ನಡೆಸಿ ಮೇಕೆಯನ್ನು ಬಲಿ ಪಡೆದು ಜಮೀನಿನಲ್ಲಿ ತುಸು ದೂರ ಎಳೆದೊಯ್ದು ಸ್ವಲ್ಪಭಾಗ ತಿಂದು ಹಾಕಿದೆ. ಹಾಗೆಯೇ ಸಮೀಪದ ಜಯರಾಜು ಅವರ ಜಮೀನಿಗೆ ದಾಳಿ ಇಟ್ಟ ಚಿರತೆ ನಾಯಿಯನ್ನು ಸಹ ಸಾಯಿಸಿ ಅರಣ್ಯ ಪ್ರದೇಶದತ್ತ ತೆರಳಿದೆ. ಭಾನುವಾರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಈ ವೇಳೆ ರೈತರು ಮಾತನಾಡಿ, ಚಿರತೆ ಹಾಗೂ ಮೇಕೆ ಬಲಿಯಾಗಿರುವುದರಿಂದ ಆತಂಕದ ವಾತಾವರಣ ಆವರಿಸಿದೆ. ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಆದ್ದರಿಂದ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಚಿರತೆ ಸೆರೆ ಹಿಡಿಯುವುದಾಗಿ ಸಿಬ್ಬಂದಿ ಭರವಸೆ ನೀಡಿದರು.